ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಚೊಂಬು ಕೊಟ್ಟಿದ್ದೀರಾ ಎಂದು ಮೋದಿಗೆ ಕೇಳುತ್ತೇವೆ: ಪ್ರಿಯಾಂಕ್ ಖರ್ಗೆ

Published 20 ಏಪ್ರಿಲ್ 2024, 7:39 IST
Last Updated 20 ಏಪ್ರಿಲ್ 2024, 7:39 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ರಾಜ್ಯಕ್ಕೆ ಏಕೆ ಬರೀ ಚೊಂಬು ಕೊಟ್ಟಿದ್ದೀರಾ ಎಂದು ಕೇಳುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ‌ಖರ್ಗೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಭೇಟಿ ಆಯಾ ರಾಮ್ ಗಯಾ ರಾಮ್ ಆಗಬಾರದು. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ಅವರಿಗೆ ನಾವು ಹಿಂದೆಯೂ ಸ್ವಾಗತ ಮಾಡಿದ್ದೇವೆ, ಈಗಲೂ ಮಾಡುತ್ತೇವೆ. ತೆರಿಗೆ ಪರಿಹಾರ, ಬರ ಪರಿಹಾರ ಸೇರಿದಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾಗಿರುವ ಪರಿಹಾರ ನೀಡಿಲ್ಲ. ನರೇಗಾ ಅಡಿಯಲ್ಲಿ ಮಾನವ ದಿನಗಳ ಹೆಚ್ಚಳಕ್ಕೆ ಮನವಿ ಮಾಡಿದ್ದೇವೆ. ಅದನ್ನೂ ಮಾಡಿಲ್ಲ. ಇದೆಲ್ಲದಕ್ಕೆ ಮೋದಿ ಅವರು ಬಂದು ಉತ್ತರ ಕೊಡಲಿ' ಎಂದು ಆಗ್ರಹಿಸಿದರು.

ತಮ್ಮನ್ನು ಕಿಂಗ್ ಪಿನ್ ಎಂದು ಕರೆದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ ಪ್ರಿಯಾಂಕ್, ಅವರಿಗೆ ಮಾಹಿತಿ ಕೊರತೆ ಇದೆ. ದಿವ್ಯಾ ಹಾಗರಗಿ ಮನೆಗೆ ಬಿಜೆಪಿ ಅಭ್ಯರ್ಥಿ ಯಾಕೆ ಹೋಗಿದ್ದಾರೆ. ಅದಕ್ಕೆ ಉತ್ತರ ನೀಡಿ ಎಂದಿದ್ದೇವೆ. ಅದಕ್ಕೆ ನನ್ನನ್ನೇ ಕಿಂಗ್ ಪಿನ್ ಅಂದಿದ್ದಾರೆ. ನಾಲ್ಕು ವರ್ಷ ಅವರದೇ ಸರ್ಕಾರ ಇತ್ತಲ್ಲ. ಯಾಕೆ ಜೈಲಿಗೆ ಹಾಕಿಸಲಿಲ್ಲ? ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಆರೋಪಿ ಮನೆಗೆ ಹೋಗಿ ಗೋಡಂಬಿ, ದ್ರಾಕ್ಷಿ ತಿಂದು ಬಂದಿದ್ದಾರೆ ಎಂದು ಟೀಕಿಸಿದರು.

'ಉಮೇಶ್ ಜಾಧವ ಮಾನ ಮರ್ಯಾದೆ ಬಿಟ್ಟು‌ ಚುನಾವಣೆಗೆ ನಿಂತಿದ್ದಾರೆ. ಮತಯಾಚಿಸಲು ಜೈಲಿಗೆ ಬೇಕಾದರೂ ಹೋಗಲಿ ಯಾರು ಬೇಡ ಅಂದಿದ್ದು. ಆದರೆ ನೈತಿಕತೆ ಬೇಡವಾ? ಮೊದಲು ಮಾಲೀಕಯ್ಯ ಗುತ್ತೇದಾರ ಬೇಕಾಗಿತ್ತು. ಹೋಗಿ ಅವರ ಕಾಲು ಹಿಡಿದರು. ಈಗ ಆರ್.ಡಿ. ಪಾಟೀಲ ಬೇಕಾಗಿದ್ದಾರೆ. ಈಗ ಅವರ ಮನೆಗೆ‌ ಹೋಗಿ ಬಂದಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಚೊಂಬು ಜಾಹೀರಾತಿಗೆ ಕುಮಾರಸ್ವಾಮಿ ಲೇವಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಕುಮಾರಸ್ವಾಮಿ ಅವರ ಹೋರಾಟ ಕೇಂದ್ರದ ವಿರುದ್ದ ಅಲ್ಲ, ಅವರ ಅಸ್ತಿತ್ವಕ್ಕಾಗಿ ಇದೆ. ಜೆಡಿಎಸ್ ಕಾರ್ಯಕರ್ತರಿಗೆ ಅವರು ಚೊಂಬು ಕೊಟ್ಟಿದ್ದಾರೆ. ಚುನಾವಣೆ ಮುಗಿದ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆ ಆಗುತ್ತದೆ ಎಂದು ಅವರೇ ಹೇಳಿದ್ದಾರಲ್ಲ ಎಂದು ತಿರುಗೇಟು‌ ನೀಡಿದರು.

ನೇಹಾ ಕೊಲೆ ಆರೋಪಿ ವಿರುದ್ಧ ಕ್ರಮ

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿಗೆ ನಮ್ಮ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ. ಅವರ ಕುಟುಂಬದವರಿಗೆ ಸಾಕಷ್ಟು ದುಃಖವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT