ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರು ಕೋವಿಡ್‌ ಕೇಂದ್ರಕ್ಕೆ ತೆರಳಲು ಸಲಹೆ

ಸರ್ಕಾರದ ತಪ್ಪು ನಿರ್ಧಾರದಿಂದ ಕೋವಿಡ್ ಪ್ರಕರಣ ಹೆಚ್ಚಳ: ಪ್ರಿಯಾಂಕ್ ಖರ್ಗೆ ಆಕ್ರೋಶ
Last Updated 9 ಮೇ 2021, 4:41 IST
ಅಕ್ಷರ ಗಾತ್ರ

ಚಿತ್ತಾಪುರ: ‘ಕೊರೊನಾ ಪಾಜಿಟಿವ್ ವರದಿ ಬಂದ ತಕ್ಷಣ ಸೋಂಕಿತರು ತಮ್ಮ ಮನೆಯವರ ಹಾಗೂ ನೆರೆಹೊರೆ, ಗ್ರಾಮದ ಹಿತದೃಷ್ಟಿಯಿಂದ ಮನೆಯಲ್ಲಿರದೇ, ಕೋವಿಡ್ ಕೇರ್ ಕೇಂದ್ರಕ್ಕೆ ಹೋಗಬೇಕು’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಪಟ್ಟಣದಲ್ಲಿ ಶನಿವಾರ ಕೊರೊನಾ ಕುರಿತು ಪರಿಶೀಲನೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ‘ಪಾಜಿಟಿವ್ ಇದ್ದವರು ಮನೆಯಲ್ಲಿಯೇ ಇರುವ ಕಾರಣ ಕೊರೊನಾ ವೈರಸ್ ವೇಗವಾಗಿ ಸಮುದಾಯದಲ್ಲಿ ಹರಡುತ್ತಿದೆ’ ಎಂದು ಅವರು ಕಳವಳ ವ್ಯಕ್ತ ಮಾಡಿದರು.

‘ಮನೆಯಲ್ಲಿ ಅದೇ ಪರಿಸರ, ಒಂದೇ ಮನೆ, ಎಲ್ಲರಿಗೂ ಒಂದೇ ಶೌಚಾಲಯ ಇರುವುದರಿಂದ ಮನೆಯವರಿಗೆ ಕೊರೊನಾ ಬೇಗ ಹರಡುತ್ತದೆ. ಪಾಜಿಟಿವ್ ಇದ್ದವರು ಮನೆಯಲ್ಲಿ ಕೂಡುವುದು ಕಷ್ಟ. ಅವರು ಮನೆಯ ಹೊರಗೆ, ಗ್ರಾಮದಲ್ಲಿ, ಬಡವಾಣೆಯಲ್ಲಿ ಅಲೆದಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸೋಂಕು ಹರಡಿದವರು ಸ್ವಯಂ ಆಗಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೋವಿಡ್ ಕೇಂದ್ರಕ್ಕೆ ಬರಬೇಕು. ಅಲ್ಲಿ ಉಚಿತ ಚಿಕಿತ್ಸೆ, ಉಪಾಹಾರ, ಊಟ, ಉತ್ತಮ ವಸತಿ ಸೌಲಭ್ಯ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

‘ಒಂದು ಬಡಾವಣೆಯಲ್ಲಿ ಕೋವಿಡ್ ಹರಡಿದ 10 ಜನರಿದ್ದರೆ ಆ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಮಾಡಲು ತಹಶೀಲ್ದಾರ್ ಮತ್ತು ಆರೋಗ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಏನೇ ಕ್ರಮ ಕೈಗೊಂಡರೂ ತಾಲ್ಲೂಕಿನ ಜನತೆಯ ಜೀವ ರಕ್ಷಣೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಅವರು ಆಕ್ರೋಶ ವ್ಯಕ್ತ ಮಾಡಿದರು.

‘ಸರ್ಕಾರ ಜಾರಿಗೆ ತಂದಿರುವ ನಿಯಮ ಮತ್ತು ಆದೇಶ ನಂಬಿ ಕುಳಿತರೆ ಕೊರೊನಾ ನಿಯಂತ್ರಣ ಕಷ್ಟ. ಪರಿಸ್ಥಿತಿ ಗಂಭೀರವಾಗುತ್ತದೆ. ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಅಂತರ್ ಜಿಲ್ಲಾ ಸಂಚಾರಕ್ಕೆ ಕಟ್ಟೆಚ್ಚರ ವಹಿಸಬೇಕು. ಮೊದಲಿನ ಅಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಸ್ತುತ ಎರಡನೇ ಅಲೆಯ ಹತೋಟಿಗೆ ಎಲ್ಲಾ ಅಧಿಕಾರಿಗಳು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ಕೈ ಮೀರಿದೆ. ಸರ್ಕಾರದ ನಡೆ ಸಮಂಜಸವಾಗಿಲ್ಲ. ಕೊರೊನಾ ನಿರ್ವ ಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಜನಪ್ರತಿನಿಧಿ, ಅಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಇನ್ನು ಜನಸಾಮಾನ್ಯರ ಗತಿ ಊಹಿಸಲು ಅಸಾಧ್ಯ’ ಎಂದರು.

ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಸಿಪಿಐ ಕೃಷ್ಣಪ್ಪ ಕಲ್ಲದೇವರ್, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಅಧಿಕಾರಿಗಳಾದ ಡಾ.ದೀಪಕ್ ಪಾಟೀಲ, ಡಾ.ಬಸಲಿಂಗಪ್ಪ ಡಿಗ್ಗಿ, ರಾಜಕುಮಾರ ರಾಠೋಡ, ಶ್ರೀಧರ್, ಸಿದ್ದಣ್ಣ ಅಣಬಿ, ಸಂಜಿಕುಮಾರ ಮಾನಕರ್, ವಾಡಿ ಪಿಎಸ್ಐ ವಿಜಯಕುಮಾರ ಭಾವಗಿ, ಎಇಇ ಅಣ್ಣಪ್ಪ ಕುದರಿ ಅನೇಕರು ಇದ್ದರು. ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಕುರಿತು ಕೈಗೊಂಡ ಚಿಕಿತ್ಸಾ ವ್ಯವಸ್ಥೆ, ವಿವಿಧ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಪೊಲೀಸರಿಗೆ ಪಿಪಿಇ ಕಿಟ್, ಮಾಸ್ಕ್, ಫೇಸ್ ಶೀಲ್ಡ್ ವಿತರಣೆ ಚಿತ್ತಾಪುರ: ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಕೆಲಸ ಮಾಡುತ್ತಿರುವ ಪಟ್ಟಣದ ಪೊಲೀಸ್ ಠಾಣೆಯ ಮತ್ತು ವಾಡಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಶಾಸಕ ಪ್ರಿಯಾಂಕ್ ಅವರು ಉಚಿತವಾಗಿ ಅಗತ್ಯ ಸುರಕ್ಷತೆಗಾಗಿ ವಿವಿಧ ಸೌಲಭ್ಯ ವಿತರಣೆ ಮಾಡಿದರು.

ಚಿತ್ತಾಪುರ ಠಾಣೆಗೆ 10 ಪಿಪಿಇ ಕಿಟ್, 150 ಮಾಸ್ಕ್, 20 ಲೀಟರ್ ಸ್ಯಾನಿಟೈಸರ್, 150 ಹ್ಯಾಂಡ್‌ಗ್ಲೌಸ್‌, 50 ಫೇಸ್ ಶೀಲ್ಡ್ ವಿತರಣೆ ಮಾಡಿದರು. ವಾಡಿ ಠಾಣೆಗೆ 250 ಮಾಸ್ಕ್, 20 ಲೀಟರ್ ಸ್ಯಾನಿಟೈಸರ್, 65 ಪೇಸ್ ಶೀಲ್ಡ್, 50 ಪಿಪಿಇ ಕಿಟ್, 120 ಹ್ಯಾಂಡ್ ಗ್ಲೌಸ್ ವಿತರಣೆ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್ಐ ವಿಜಯಕುಮಾರ ಭಾವಗಿ, ನಾಗಯ್ಯ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT