ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಚಿದ ಪ್ರಗತಿಶೀಲ ಕೊಂಡಿ ಹೊಸೆದ ಕಟ್ಟೀಮನಿ: ನಟರಾಜ ಹುಳಿಯಾರ ಅಭಿಮತ

ಬಸವರಾಜ ಕಟ್ಟೀಮನಿ ಕುರಿತ ವಿಚಾರ ಸಂಕಿರಣ
Last Updated 14 ಡಿಸೆಂಬರ್ 2019, 13:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಾಲದ ಕೊಂಡಿ ಕಳಚಿ ಬಿದ್ದಿದೆ, ನಾನದನ್ನು ಸರಿ ಮಾಡಲು ಹುಟ್ಟಿದ್ದೇನೆ’ ಎಂಬ ಸಾಲೊಂದು ಷೇಕ್‌ಸ್ಪಿಯರ್‌ ನಾಟಕದಲ್ಲಿ ಬರುತ್ತದೆ. ಈ ಮಾತಿಗೆ ಅನ್ವರ್ಥ ಎನ್ನುವಂತೆ ಬದುಕಿದ್ದವರು ಸಾಹಿತಿ ಬಸವರಾಜ ಕಟ್ಟೀಮನಿ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಟರಾಜ ಹುಳಿಯಾರ ಅಭಿಪ್ರಾಯ ಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಸಂಗಮೇಶ್ವರ ಮಹಿಳಾ ಮಂಡಳದ ಲೇಖಕಿಯರ ವೇದಿಕೆ ಆಶ್ರಯದಲ್ಲಿ ಶನಿವಾರ ನಡೆದ ‘ಬಸವರಾಜ ಕಟ್ಟೀಮನಿ ಜನ್ಮಶತಮಾನೋತ್ಸವ– ಸಾಹಿತ್ಯ ಅನುಸಂಧಾನ’ ವಿಚಾರ ಸಂಕಿರಣದಲ್ಲಿ ಅವರು ಆಶಯ ನುಡಿ ಆಡಿದರು.

‘ನಿತ್ರಾಣ ಸ್ಥಿತಿಗೆ ಬಂದಿದ್ದ ಪ್ರಗತಿಶೀಲ ಸಾಹಿತ್ಯವನ್ನು ಮತ್ತೆ ಹೊಸೆದವರಲ್ಲಿ ಕಟ್ಟೀಮನಿ ಪ್ರಮುಖರು. ರಷ್ಯಾ ಕ್ರಾಂತಿ, ಮಾರ್ಕ್ಸ್‌ ವಾದ, ಬಸವಣ್ಣ ಅವರಿಂದ ಪ್ರಭಾವಿತರಾದವರು. ದೌರ್ಜನ್ಯ ವಿರೋಧಿ ಹಾಗೂ ಸಮಾನತೆಯ ಹಳಿಗಳ ಮೇಲೆ ಅವರ ಸಾಹಿತ್ಯ ಸಂಚಾರ ಶಕ್ತಿಶಾಲಿ ಆಗಿದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಮಾತನಾಡಿ, ‘ಕಟ್ಟೀಮನಿ ಅವರು ‘ಹರಿಜನಾಯನ’ ಕಾದಂಬರಿಯಲ್ಲಿ ಶೋಷಿತರ ಸಂವೇದನೆಗೆ ಸ್ಪಂದಿಸುತ್ತಲೇ ಅವರ ಚಳವಳಿ ಗೆಲ್ಲಿಸುತ್ತಾರೆ. ಹೀಗೆ ತನ್ನದಲ್ಲದ ಸಮುದಾಯವನ್ನೂ ಆಲಿಂಗಿಸಿಕೊಂಡಾಗ ಸತ್ಯವಂತ ಸಾಹಿತಿ ಹುಟ್ಟುತ್ತಾನೆ. ಆದರೆ, ಎಸ್‌.ಎಲ್‌. ಭೈರಪ್ಪ ಅವರಂಥ ಸಾಹಿತಿಗಳು ಇದಕ್ಕೆ ವಿರುದ್ಧ. ‘ದಾಟು’ ಕಾದಂಬರಿಯಲ್ಲಿ ಅವರು ಉದ್ದೇಶ ಪೂರ್ವಕವಾಗಿ ದಲಿತ ಚಳವಳಿ ಸೋಲಿಸುತ್ತಾರೆ. ತನ್ನ ಜಾತಿಯಲ್ಲದ್ದು ಜಾತಿಯೇ ಅಲ್ಲ, ತನ್ನ ಧರ್ಮವಲ್ಲದ್ದ ಒಂದು ಧರ್ಮವೇ ಅಲ್ಲ, ತನ್ನ ಚಳವಳಿ ಅಲ್ಲದ್ದು ಒಂದು ಚಳವಳಿಯೇ ಅಲ್ಲ ಎಂಬ ನಿಲುವು ಅವರದು’ ಎಂದರು.

‘ತಮ್ಮ 70ನೇ ವಯಸ್ಸಿನಲ್ಲೂ ಬಸವರಾಜ ಕಟ್ಟೀಮನಿ ಮತ್ತೊಂದು ಮದುವೆ ಆಗಲು ಬಯಸುತ್ತಾರೆ! ಪೆರಿಯಾರ್‌ ಕೂಡ 70ನೇ ವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿದ್ದರು. ಆ ಮದುವೆಯಿಂದ ಮತ್ತೊಬ್ಬರಿಗೆ ಒಳ್ಳೆಯದಾಗುತ್ತದೆ ಎಂಬ ಅವರ ನಿರ್ಧಾರ; ಆಗ ಅಲ್ಲದಿದ್ದರೂ ಈಗ ಮೌಲಿಕ ಅನಿಸುತ್ತದೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು. ಕುಲಪತಿ ಪ್ರೊ.ಲಕ್ಷ್ಮಣ ರಾಜನಾಳಕರ್ ಉದ್ಘಾಟಿಸಿದರು. ಲೇಖಕಿಯರ ವೇದಿಕೆಯ ಅಧ್ಯಕ್ಷೆ ವೈಶಾಲಿ ದೇಶಮುಖ ವೇದಿಕೆ ಮೇಲಿದ್ದರು. ಪ್ರತಿಷ್ಠಾನದ ಸಂಚಾಲಕ ಶಿರೀಷ ಜೋಶಿ ಸ್ವಾಗತಿಸಿದರು. ಡಾ.ಸಿದ್ಧಲಿಂಗ ದಬ್ಬಾ ನಿರೂಪಿಸಿದರು.

‘ಬದುಕಿಗಾಗಿ ಬರವಣಿಗೆ, ಬರವಣಿಗಾಗಿ ಬದುಕು’

‘ಬಸವರಾಜ ಕಟ್ಟೀಮನಿ ಬರವಣಿಗೆ ಮಾಡಿಕೊಂಡೇ ಬದುಕಿದರು. ಅವರ ಪ್ರಗತಿಶೀಲ ಮನಸ್ಸು ಎಷ್ಟು ಗಟ್ಟಿಯಾಗಿತ್ತೆಂದರೆ ದೌರ್ಜನ್ಯ ಸಹಿಸಿಕೊಳ್ಳದೇ ಹಲವು ಉದ್ಯೋಗ, ಕಾರು, ಬಂಗಲೆ ಕಳೆದುಕೊಂಡರು’ ಎಂದು ಪತ್ರಕರ್ತ ಶಿವಕುಮಾರ ಕಟ್ಟೀಮನಿ ಹೇಳಿದರು.

‘ಐದಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಕಟ್ಟೀಮನಿ, ಅವರ ಪತ್ರಿಕೆಗಳ ಮಾಲೀಕರ ವಿರುದ್ಧವೇ ಸಂಪಾದಕೀಯ, ಲೇಖನ ಬರೆದು ಕೆಲಸ ಕಳೆದುಕೊಂಡರು. ‘ಸೋಮಾರಿ ಜಗದ್ಗುರುಗಳನ್ನು ದುಡಿಯಲು ಹಚ್ಚಿರೋ’ ಎನ್ನುವ ಅವರ ಲೇಖನ ದುಡಿಯುವವರ ಮೇಲೆ ದುಡಿಯದವರ ದಬ್ಬಾಳಿಕೆ ಎತ್ತಿತೋರಿಸಿತು. ಅವರನ್ನು ವಿಧಾನ ಪರಿಷತ್‌ ಸದಸ್ಯರಾಗಿ ನೇಮಕ ಮಾಡಿದಾಗ, ನೇಮಕ ಮಾಡಿದವರ ವಿರುದ್ಧವೇ ‘ವಿಧಾನಸಭೆಯಲ್ಲಿನ ಶುಕ್ರವಾರದ ಪೂಜೆ ನಿಲ್ಲಿಸಿ’ ಎಂದು ಕೂಗಿದ್ದರು. ಅವರ ಧೀರ ನಿಲುವು, ಕೆಚ್ಚು ಅಕ್ಷರದಲ್ಲೂ ಮೂಡಿದೆ’ ಎಂದು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT