ಕಲಬುರಗಿ: ಶಿವಮೊಗ್ಗ ಜಿಲ್ಲೆಯ ರಾಗಿ ಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳ ಮನೆಗಳ ಮೇಲೆ ಕಲ್ಲುತೂರಾಟ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಭೆಯಲ್ಲಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಮಾತನಾಡಿ, ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲ ಮುಸ್ಲಿಮರು, ಕತ್ತಿ ಹಿಡಿದಿರುವ ಟಿಪ್ಪು ಸುಲ್ತಾನ್ ಚಿತ್ರದ ಫ್ಲೆಕ್ಸ್‌ನಲ್ಲಿ ಹಿಂದುಗಳನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿತ್ತು. ಅದನ್ನು ಗುರುತಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು, ಫ್ಲೆಕ್ಸ್‌ಗೆ ಬಣ್ಣ ಬಳಿದಿದ್ದರು. ಇದನ್ನೇ ನೆಪವಾಗಿಸಿಕೊಂಡು ಕೆಲ ಮುಸ್ಲಿಮರು, ಹಿಂದೂಗಳ ಮೇಲೆ ಹಲ್ಲೆ, ಮನೆಗಳ ಮೇಲೆ ಕಲ್ಲುತೂರಾಟ ಹಾಗೂ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದನ್ನು ಸೇನೆ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಮೆರವಣಿಗೆಯಲ್ಲಿ ತಲ್ವಾರ್ ಹಿಡಿದಿದ್ದು ಏಕೆ ಎಂಬುದು ತನಿಖೆಯಾಗಬೇಕು. ಇಂತಹ ಘಟನೆಯನ್ನು ತಡೆಯಲು ಹೋದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಯನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಆದರೆ ಸಚಿವರು, ಶಾಸಕರು ಮಾಧ್ಯಮಗಳಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅವರಿಗೆ ಪ್ರಕರಣದ ಗಂಭೀರತೆ ಅರ್ಥವಾದಂತಿಲ್ಲ. ಹೀಗಾಗಿ ಸರ್ಕಾರ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕಲ್ಲು ತೂರಾಟದ ಹಿಂದಿರುವವರನ್ನು ಹಾಗೂ ನಡೆಸಿದವರನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು. ಹಲ್ಲೆಗೊಳಗಾದವರಿಗೆ, ಹಾನಿಗೀಡಾಗಿರುವ ಮನೆಗಳು ಹಾಗೂ ವಾಹನ ಮಾಲೀಕರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಶಿಕಾಂತ ಆರ್. ದೀಕ್ಷಿತ್, ಶಂಕರ ಚೋಕಾ, ಸಂತೋಷ ಸೋನಾವಣೆ, ಸುನೀಲ ರಾಠೋಡ, ವಿಕಾಸ ಸಗರ, ದಶರಥ ಪಿ. ಇಂಗೋಳೆ, ಸಂಜನಾ, ಭಾಗ್ಯಶ್ರೀ, ಸೋನಾಕ್ಷಿ, ರಾಜು ಕಮಲಾಪುರೆ, ಮಹಾದೇವ ಕೋಟನೂರ, ಪ್ರಕಾಶ ವಾಘಮೋರೆ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.