ಬುಧವಾರ, ಅಕ್ಟೋಬರ್ 28, 2020
19 °C
ನಗರದಲ್ಲಿ ಸರಣಿ ಪ್ರತಿಭಟನೆ, ವಿವಿಧ ಪಕ್ಷ, ಸಂಘಟನೆಗಳಿಂದ ಮನವಿ ಸಲ್ಲಿಕೆ

‘ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಉತ್ತರ ಪ್ರದೇಶದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ, ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಶನಿವಾರ ಜೆಡಿಎಸ್, ಬಿಎಸ್‌ಪಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಜೆಡಿಎಸ್‌ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಜೆಡಿಎಸ್‌ ಜಿಲ್ಲಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಯುವತಿ ಮೇಲೆ ಅತ್ಯಾಚಾರ ನಡೆದಿದ್ದರೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೌನವಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪರಿಶಿಷ್ಟ ಜಾತಿಯವರ ಮೇಲೆ ಅನ್ಯಾಯ, ಅತ್ಯಾಚಾರ ಹೆಚ್ಚಾಗಿವೆ. ಗೋ ಹತ್ಯೆ ಮತ್ತು ಕ್ರಿಕೆಟ್ ಆಟಗಾರರು, ಸಿನಿಮಾ ನಟ-ನಟಿಯವರ ಯಾವುದೇ ವಿಚಾರವಾಗಿ ಪ್ರಧಾನಿ ಮೋದಿ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ಪರಿಶಿಷ್ಟ ಜಾತಿಯ ಯುವತಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದರೂ ಮೋದಿ ಒಂದೇ ಒಂದು ಮಾತನಾಡಿಲ್ಲ’ ಎಂದು ಪಕ್ಷದ ಮುಖಂಡರು ಆಕ್ರೋಶ ಹೊರಹಾಕಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ದೇವೇಗೌಡ ತೆಲ್ಲೂರ, ಮಹಾಪ್ರಧಾನ ಕಾರ್ಯದರ್ಶಿ ಶ್ಯಾಮರಾವ ಸೂರನ್, ಮುಖಂಡರಾದ ಮನೋಹರ ಪೋದ್ದಾರ, ಎಂ.ಡಿ. ಅಲಿಮೋದ್ದಿನ್ ಇನಾಮದಾರ ನೇತೃತ್ವ ವಹಿಸಿದ್ದರು.

ಬಿಎಸ್‌ಪಿ ಧರಣಿ: ‘ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.

‘19 ವರ್ಷದ ಯುವತಿಯನ್ನು ನಾಲ್ವರು ಅತ್ಯಾಚಾರ ಎಸಗಿಸಿಮ, ಆಕೆಯ ಬೆನ್ನು ಮೂಳೆ, ಕಾಲು ಮುರಿದು, ನಾಲಿಗೆ ಕತ್ತರಿಸಿ ಕೊಲೆಗೈದಿದ್ದಾರೆ. ಮೇಲಾಗಿ ಮೃತಳ ಮುಖವನ್ನು ಸಂತ್ರಸ್ತ ಕುಟುಂಬಕ್ಕೂ ತೋರಿಸದೆ ಮತ್ತು ಮರಣೋತ್ತರ ಪರೀಕ್ಷೆ ಮಾಡದೆ ಪೊಲೀಸರು ಅಂತ್ಯಸಂಸ್ಕಾರ ಮಾಡಿದ್ದು ಕಾನೂನು ಬಾಹಿರ’ ಎಂದು ಘೋಷಣೆ ಕೂಗಿದರು.

ಮುಖಂಡರಾದ ಮಹಾದೇವ ಧನ್ನಿ, ರಾಮಚಂದ್ರ ಝಂಡೇ, ಮಲ್ಲಿಕಾರ್ಜುನ ಕೊಡ್ಲಿ, ಅಸ್ಲಾಂ ಪಟೇಲ್ ಕೊಳ್ಳೂರ, ಮೈಲಾರಿ ಶೆಳ್ಳಗಿ ನೃತೃತ್ವ ವಹಿಸಿದ್ದರು.

ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ:  ಪರಿಶಿಷ್ಟ ಜಾತಿಯ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣ ಸಂವಿಧಾನದ ಆಶಯಗಳನ್ನು ಹೊಸಕಿ ಹಾಕಿದಂತೆ ಆರೋಪಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟದ ಮುಖಂಡರು ಧರಣಿ ನಡೆಸಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅರಾಜಕತೆ ನಡೆಸಿದೆ. ಮಹಿಳೆಯರು, ಮಕ್ಕಳು ನಿರಂತರವಾಗಿ ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕು ಎಂದು ಅರ್ಜುನ ಭದ್ರೆ, ರಮೇಶ ಕವಡೆ, ಮಹಾದೇವ ಕೋಳಕೂರ, ಮರೆಪ್ಪ ಮೇತ್ರಿ, ಭೀಮಶ್ಯಾ ಖನ್ನಾ, ಮಲ್ಲಿಕಾರ್ಜುನ ಖನ್ನಾ ಆಗ್ರಹಿಸಿದರು.

ಬಹುಜನ ದಲಿತ ಸಂಘರ್ಷ ಸಮಿತಿ: ಸಮಿತಿಯ ಜಿಲ್ಲಾ ಘಟಕ ಕಾರ್ಯಕರ್ತರು ಕೂರ ಪ್ರತಿಭಟನೆ ನಡೆಸಿದರು. ಅತ್ಯಾಚಾರ ಪ್ರಕರಣದ ಬಗ್ಗೆ ರಾಷ್ಟ್ರಪತಿಗಳು ವರದಿ ತರಿಸಿಕೊಂಡು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.‌

ಮುಖಂಡರಾದ ಶಿವಪ್ಪ ಬಿಲಗುಂದಿ, ಹಣಮಂತರಾಯ ಮಾಡಗೇರಿ, ಮಡಿವಾಳಪ್ಪ ನಿಂಬರಗಿ, ಸೋನುಬಾಯಿ ಶೃಂಗೇರಿ, ಸೀಮಾ ಹಡಗಿಲ್ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.