ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತರಾಜ ವರದಿ ಜಾರಿಗೆ ಆಗ್ರಹಿಸಿ 21ರಂದು ಪ್ರತಿಭಟನೆ

Published 16 ನವೆಂಬರ್ 2023, 13:38 IST
Last Updated 16 ನವೆಂಬರ್ 2023, 13:38 IST
ಅಕ್ಷರ ಗಾತ್ರ

ಕಲಬುರಗಿ: ‘ಎಚ್‌.ಕಾಂತರಾಜ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರುವಂತೆ ಒತ್ತಾಯಿಸಿ ನವೆಂಬರ್ 21ರಂದು ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು’ ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಮಹಾಂತೇಶ ಎಸ್‌. ಕೌಲಗಿ ಹೇಳಿದರು.

‘ಅಂದು ಬೆಳಿಗ್ಗೆ 11ಕ್ಕೆ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು. ಬಳಿಕ ಡಿ.ಸಿ. ಕಚೇರಿ ಮುಂಭಾಗ ಸಾಂಕೇತಿಕವಾಗಿ ಒಂದು ದಿನ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ವರದಿ ಬಹಿರಂಗಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಮುಂದುವರಿದ ಸಮುದಾಯಗಳು, ಕಾಂತರಾಜ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿವೆ. ವರದಿ ಜಾರಿಗೂ ಅಡ್ಡಿಪಡಿಸುತ್ತಿವೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ವಿರೋಧವನ್ನು ಲೆಕ್ಕಿಸದೆ ನವೆಂಬರ್ ಒಳಗೆ ವರದಿಯನ್ನು ಬಹಿರಂಗ ಪಡಿಸಬೇಕು. ಆ ಮೂಲಕ ಹಿಂದುಳಿದ ವರ್ಗಗಳ  ಕಲ್ಯಾಣಕ್ಕೆ ಅನುವು ಮಾಡಿಕೊಡಬೇಕು. ವರದಿಯನ್ನು ವಿರೋಧಿಸುವವರು ಸಾಮಾಜಿಕ ನ್ಯಾಯದ ಹರಿಕಾರರಾದ ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ಆಶಯಗಳನ್ನು ಗಾಳಿಗೆ ತೂರುವವರು’ ಎಂದರು.

‘2014ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತಿಳಿಯಲು ಕಾಂತರಾಜ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿದ್ದರು. ರಾಜ್ಯದಾದ್ಯಂತ 1.6 ಲಕ್ಷ ಸರ್ಕಾರಿ ನೌಕರರು 1.3 ಕೋಟಿ ಕುಟುಂಬಗಳನ್ನು ಭೇಟಿ ಮಾಡಿ, ದತ್ತಾಂಶವನ್ನು ಸಂಗ್ರಹಿಸಿದ್ದಾರೆ. ಇದಕ್ಕೆ ಸುಮಾರು ₹ 169 ಕೋಟಿ ಖರ್ಚಾಗಿದೆ. ಅಧ್ಯಯನದ ಮಹತ್ವವನ್ನು ತಿಳಿಯದೆ ಕೆಲವರು ಮನೆಯಲ್ಲಿ ಕುಳಿತು ವರದಿ ಸಿದ್ಧಪಡಿಸಲಾಗಿದೆ ಎಂದು ಕುಹಕ ಆಡುತ್ತಿದ್ದಾರೆ. ಈ ಬಗ್ಗೆ ಸಾಕ್ಷಿ ಇದ್ದರೆ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಸುಭಾಷ ಪಂಚಾಳ, ಅಲೆಮಾರಿ ಸಮುದಾಯದ ಮಹಾಂತೇಶ ಯಾದವ್, ಮಹೆಬೂಬ್ ಶಹಾ ದರ್ವೇಶಿ, ಮಹಾ ಒಕ್ಕೂಟ ಅಧ್ಯಕ್ಷ ಕುಮಾರ ಯಾದವ್, ಸಹ ಕಾರ್ಯದರ್ಶಿ ಹಣಮಯ್ಯಾ ಆಲೂರ್, ಕೋಲಿ ಸಮುದಾಯದ ಮುಖಂಡ ಬಸವರಾಜ ಬೂದಿಹಾಳ, ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ, ಕಾಂಗ್ರೆಸ್ ನಾಯಕಿ ರೇಣುಕಾ ಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT