ಸೋಮವಾರ, ಮೇ 23, 2022
30 °C
ತಳವಾರ, ಪರಿವಾರ ಎಸ್ಟಿ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಎಸ್‌ಟಿ ಪ್ರಮಾಣಪತ್ರ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಅಧಿಸೂಚನೆಗಳ ಪ್ರಕಾರ ತಳವಾರ ಹಾಗೂ ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿ ತಳವಾರ, ‍ಪರಿವಾರ ಎಸ್ಟಿ ಹೋರಾಟ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ರಾಜಕೀಯ ದುರುದ್ದೇಶದಿಂದ ಮತ್ತು ಇನ್ನೊಂದು ಸಮುದಾಯದ ಒತ್ತಡಕ್ಕೆ ಮಣಿದು ಪ್ರಮಾಣಪತ್ರ ನೀಡು ವುದನ್ನು ತಡೆಹಿಡಿದು ಗೊಂದಲದ ಸುತ್ತೋಲೆ ಸರ್ಕಾರ ಹೊರಡಿಸುತ್ತಿದೆ ಎಂದು ಆರೋಪಿಸಿದರು.

ತಳವಾರ, ‍ಪರಿವಾರ ಸಮುದಾಯದವರಿಗೆ ಸೌಲಭ್ಯ ಕೊಡಬಾರದು ಎಂಬ ದುರುದ್ದೇಶದಿಂದ ಮಹಾರಾಷ್ಟ್ರದಲ್ಲಿ ನಡೆದ ಆನಂದ ವರ್ಸಸ್ ಕಮಿಟಿ ಸಂಬಂಧಿಸಿದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಹಿಂದುಳಿದವರಲ್ಲಿಯೂ ತಳವಾರ, ಪರಿವಾರ ಸಮುದಾಯದವರಿದ್ದಾರೆ ಎಂದು ಯಾವ್ಯಾವುದಕ್ಕೋ ಥಳುಕು ಹಾಕಿ ಎಸ್ಟಿ ಪ್ರಮಾಣಪತ್ರ ನೀಡುತ್ತಿಲ್ಲ. ರಾಜ್ಯದಲ್ಲಿ 88 ಎಚ್‌ನಲ್ಲಿ ಇರುವ ತಳವಾರ, ಪರಿವಾರ, ಬೋಯಾ ಮಾತ್ರ ಇದೆ. ಇದನ್ನು ಹೊರತುಡಿಸಿ ಹಿಂದುಳಿದವರಲ್ಲಿ ಮತ್ಯಾವ ತಳವಾರ ಇಲ್ಲ ಎಂದರು.

ಕರ್ನಾಟಕ ಹೈಕೋರ್ಟ್ 1985ರಲ್ಲಿ ಪ್ರಕರಣವೊಂದರಲ್ಲಿ ಕೋಯಾ ಜಾತಿಯ ಪರ್ಯಾಯ ಪದವಾದ ಕೋಲಿ, ಕಬ್ಬಲಿಗ, ತಳವಾರ ಒಂದೇ ಎಂದು ಆದೇಶ ನೀಡಿದೆ. ಈ ಆದೇಶದನ್ವಯ 1986ರ ಮೇ ತಿಂಗಳಲ್ಲಿ ಕರ್ನಾಟಕ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ತಳವಾರ, ಪರಿವಾರದವರಿಗೆ ಅನ್ಯಾಯ ಮಾಡದೇ ಗೆಜೆಟ್ ಅಧಿಸೂಚನೆ ಪ್ರಕಾರ ಸಂವಿಧಾನಬದ್ಧವಾದ ನ್ಯಾಯವನ್ನು ಮಾನವೀಯ ನೆಲೆಗಟ್ಟಿನಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಡಾ. ಸರ್ದಾರ ರಾಯಪ್ಪ, ಮುತ್ಯಾ ತೊನಸನಹಳ್ಳಿಯ ಶರಣ ಕೊತ್ಲಪ್ಪ ಸ್ವಾಮೀಜಿ, ಸುನೀತಾ ತಳವಾರ, ದೇವೇಂದ್ರ ಕ್ಯಾಸ್ಪಳ್ಳಿ, ಚಂದ್ರಕಾಂತ ಗಣವಾರ, ಚಂದ್ರಕಾಂತ ತಳವಾರ ದೇಸಾಯಿ ಕಲ್ಲೂರ, ಮಾರುತಿ ಬೂತಾಳಿ, ರವಿಕುಮಾರ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು