ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬಾಕಿ ವೇತನಕ್ಕೆ ಆಗ್ರಹಿಸಿ ದರಣಿ

ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಮನವಿ
Last Updated 2 ಆಗಸ್ಟ್ 2021, 11:20 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ನೀಡಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಮ್ಯಾನ್‌ಪವರ್‌ ಏಜೆನ್ಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಯಮಿತವಾಗಿ ಸಂಬಳವನ್ನೂ ಕೊಡುತ್ತಿಲ್ಲ. ಇಪಿಎಫ್‌ ಮತ್ತು ಇಎಸ್‌ಐ ಸೌಲಭ್ಯದಲ್ಲೂ ಮೋಸ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಹಲವರಿಗೆ ಇನ್ನೂ ಆರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ನೌಕರರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೂಡಲೇ ಎಲ್ಲರ ಸಂಬಳ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಘೋಷಣೆ ಕೂಗಿದರು.

ಕೋವಿಡ್‌ ಕಾರಣ ಜಿಲ್ಲೆಯ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳು ಕಳೆದ ಎರಡು ವರ್ಷಗಳಿಂದ ಬಂದ್‌ ಆಗಿವೆ. ಇವುಗಳನ್ನೇ ನಂಬಿ ಬದುಕುವ ಜನ ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಈಗ ಹಾಸ್ಟೆಲ್‌ಗಳು ಮರು ಆರಂಭವಾಗಿವೆ. ಆದರೂ ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ನಮ್ಮ ಸಂಕಷ್ಟ ಅರ್ಥ ಮಾಡಿಕೊಂಡು ತಕ್ಷಣಕ್ಕೆ ಕೆಲಸಕ್ಕೆ ಹಾಜರಾಗುವಂತೆ ಆದೇಶ ನೀಡಬೇಕು ಎಂದೂ ಆಗ್ರಹಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾ ಗಾಂಧಿ, ಡಾ.ಅಂಬೇಡ್ಕರ್‌ ಮುಂತಾದ ವಸತಿ ಶಾಲೆ, ವಸತಿ ನಿಲಯಗಳಲ್ಲಿ ತಲಾ 11 ನೌಕರರು ಇದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ಕೇವಲ ಆರು ಜನರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಇದರಿಂದ ಉಳಿದವರ ಬದುಕು ಚಿಂತಾಜನಕವಾಗಿದೆ ಎಂದೂ ಮನವಿಯಲ್ಲಿ ಮನವರಿಕೆ ಮಾಡಿದ್ದಾರೆ.

ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಕೋವಿಡ್‌ ರಜೆ ವೇತನವನ್ನೂ ಕೊಟ್ಟಿಲ್ಲ. ಅದನ್ನೂ ಮಂಜೂರು ಮಾಡಬೇಕು. ಐದು ವರ್ಷ ದುಡಿದ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆ ಅಡಿ ನೇಮಕಾತಿ ಆದೇಶ ನೀಡಬೇಕು. ಹೆಚ್ಚುವರಿ ವೇತನವನ್ನು ಸರ್ಕಾರದ ಆದೇಶದಂತೆಯೇ ನೀಡಲು ಏಜೆನ್ಸಿಗಳಿಗೆ ಸೂಚನೆ ನೀಡಬೇಕು ಎಂದೂ ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸುರೇಶ ದೊಡ್ಡಮನಿ, ಅಶ್ವಿನಿ ಚವ್ಹಾಣ, ಪರಶುರಾಮ ಹಡಲಗಿ, ರಾಮಚಂದ್ರ ಪವಾರ, ಭಾಗಣ್ಣ ದೇವನೂರ, ಶಶಿಕಲಾ ಮದ್ರಕಿ, ಮಾಪಣ್ಣ ಜಾನಕರ, ಸರೋಜಿನಿ ನಿಡಗುಂದಾ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT