ಕಲಬುರಗಿ: ಒಳ ಮೀಸಲಾತಿಯ ಜಾರಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ನ್ಯಾ.ಸದಾಶಿವ ಆಯೋಗದ ವರದಿಯಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಪ್ರತ್ಯೇಕ ಒಳಮೀಸಲಾತಿ ವರ್ಗೀಕರಣ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಇದು ಮೂರು ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಆರಂಭಿಸಿರುವ ಸರ್ಕಾರ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಸದಾಶಿವ ಆಯೋಗದ ವರದಿಯ ಅನ್ವಯದಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನವನ್ನು ಬೇರೆ ಇಲಾಖೆಗಳಿಗೆ ಬಳಸಲಾಗುತ್ತಿದೆ. ಅದನ್ನು ತಡೆ ಹಿಡಿದು, ಶೋಷಿತರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆದಿ ಜಾಂಬವ ಅಭಿವೃದ್ಧಿ ನಿಗಮ ಹಾಗೂ ಡಾ.ಬಾಬು ಜಗಜೀವನ್ ರಾವ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಕೋರಿದರು.
ಯಾದಗಿರಿ ಜಿಲ್ಲೆಯ ಪಿಎಸ್‌ಐ ಪರಶುರಾಮ್ ಅವರ ಸಾವಿನ ಪ್ರಕರಣದ ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮೃತರ ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ಕೊಡಬೇಕು. ದಲಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಾದಿಗ ಜನಾಂಗಕ್ಕೆ ರಾಜ್ಯ ಸರ್ಕಾರ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಶರಣರಾಜ ಗೊಬ್ಬರು, ಮಾಪಣ್ಣ ಹದನೂರ, ಚಂದ್ರಕಾಂತ ಸಗರಕರ್, ಮಲ್ಲಪ್ಪಾ ಚಿಗನೂರ, ದೇವಿಂದ್ರ ಹಾದಿಮನಿ, ಶಿವರಾಜ ಜನಕೇರಿ, ಮಲ್ಲೇಶಿ ಸೈದಾಪೂರ ಸೇರಿ ಹಲವರು ಪಾಲ್ಗೊಂಡಿದ್ದರು.