ಶನಿವಾರ, ಸೆಪ್ಟೆಂಬರ್ 18, 2021
21 °C
ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟದ ಪ್ರತಿಭಟನೆ

ವಿದ್ಯುಚ್ಛಕ್ತಿ ಖಾಸಗೀಕರಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿ ಮಾಡಿ, ಖಾಸಗೀಕರಣಗೊಳಿಸುವ ಕ್ರಮ ಕೈಬಿಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಬಹಮನಿ ಕೋಟೆ ಎದುರಿಗೆ ಇರುವ ಜೆಸ್ಕಾಂ ಕಚೇರಿ ಎದುರು ಜಮಾವಣೆಗೊಂಡು ‘ದ್ವಾರಸಭೆ’ ನಡೆಸಿದ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸರ್ಕಾರದ ನಡೆ ವಿರುದ್ಧ ಘೋಷಣೆ ಕೂಗಿದರು. ವಿದ್ಯುಚ್ಛಕ್ತಿ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಂಬಂಧಿಸಿದ ಇಲಾಖೆ. ಇದನ್ನೇ ಖಾಸಗೀಕರಣ ಮಾಡಿದರೆ ನೌಕರರು ಮಾತ್ರವಲ್ಲ; ಸಾರ್ವಜನಿಕರಿಗೂ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಸಿದರು.

ಈಗಾಗಲೇ ದೇಶದ ಗಯಾ, ಬಗಲ್‌ಪುರ, ಕಾನ್ಪುರ, ಗ್ವಾಲಿಯರ್‌, ಔರಂಗಬಾದ್‌ ಮುಂತಾದೆಡೆ ಖಾಸಗೀಕರಣ ಮಾಡಲಾಗಿದ್ದು, ಅವು ವಿಫಲಗೊಂಡಿವೆ. ಆದರೂ ಎಚ್ಚೆತ್ತುಕೊಳ್ಳದ ಸರ್ಕಾರ ಈಗ ದೇಶದೆಲ್ಲೆಡೆ ಖಾಸಗಿ ಮಾಡಲು ಹೊರಟಿದೆ. ಸದ್ಯ ರೈತರಿಗೆ ಅನುಕೂಕಲಕ್ಕೆ ತಕ್ಕಂತೆ ವಿದ್ಯುತ್‌ ಪೂರೈಸಲಾಗುತ್ತಿದೆ. ಒಂದು ವೇಳೆ ಇದು ಖಾಸಗಿಯವರ ಕೈಗೆ ಹೋದರೆ ಅವರು ರೈತರ ಲಾಭದ ಬದಲು ತಮ್ಮ ಲಾಭ ನೋಡಿಕೊಳ್ಳುತ್ತಾರೆ. ಇದರಿಂದ ಇಲಾಖೆಗೆ ಆದಾಯ ಬರಬಹುದು ಆದರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ ಎಂದೂ ಮುಖಂಡರು ಹೇಳಿದರು.

ಈಗ ವಿದ್ಯುತ್‌ ಇಲಾಖೆಯು ಸಾರ್ವಜನಿಕ ಸೇವಾ ವಲಯವಾಗಿದೆ. ಆದರೆ, ಖಾಸಗೀಕರಣದಿಂದ ಲಾಭಕೋರ ಸಂಸ್ಥೆಯಾಗಿ ಬೆಳೆಯಲಿದೆ. ಇದರಿಂದ ಬಡವರು, ಕೆಳವರ್ಗದವರು, ರೈತರಿಗೆ ವಿದ್ಯುತ್‌ ಬಿಲ್‌ ಭರ್ತಿ ಮಾಡಲಾಗದಂಥ ದಿನಗಳು ಬರಬಹುದು. ಸೇವಾ ಸಂಸ್ಥೆಯನ್ನು ಬಂಡವಾಳಶಾಹಿಗಳ ಕೈಗೆ ಕೊಡಬೇಡಿ ಎಂದೂ ಘೋಷಣೆ ಕೂಗಿದರು.

135 ವರ್ಷಗಳ ಇತಿಹಾಸ ಹೊಂದಿರುವ ವಿದ್ಯುತ್‌ ಇಲಾಖೆಗೆ ದುಡಿದವರ ಸಂಖ್ಯೆಗೆ ಲೆಕ್ಕವಿಲ್ಲ. ಕಾರ್ಮಿಕರ ಶ್ರಮದಿಂದ ಈ ಸಂಸ್ಥೆಗಳು ಇಷ್ಟು ದೊಡ್ಡದಾಗಿ ಬೆಳೆದಿವೆ. ಈಗ ಕಾರ್ಮಿಕರನ್ನೇ ಬೀದಿಪಾಲು ಮಾಡಲು ಹೊರಟಿರುವುದು ಎಷ್ಟು ಸರಿ? ತಿದ್ದುಪಡಿ ಕ್ರಮ ಅಸಾಂವಿಧಾನಿಕವಾಗಿದೆ. ಇದನ್ನು ಕೈ ಬಿಡಬೇಕು ಎಂದೂ ಆಗ್ರಹಿಸಿದರು.‌

ರಾಷ್ಟ್ರಮಟ್ಟ ಸಮಿತಿ ನಿರ್ದೇಶನದಂತೆ ಆಗಸ್ಟ್ 10ರಂದು ದೇಶದಾದ್ಯಂತ ಹೋರಾಟ ನಡೆಯಲಿದೆ. ಈ  ಆಂದೋಲನದಲ್ಲಿ ಭಾಗವಹಿಸಿ ರಾಜ್ಯದಾದಂತ ಒಕ್ಕೂಟದ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ಅಂದು ಕೆಲಸ ಸ್ಥಗಿತಗೊಳಿಸಲಾಗುವುದು. ವಿದ್ಯುತ್ ಗುತ್ತಿಗೆದಾರರು, ರೈತರು, ಗ್ರಾಹಕರನ್ನು ಒಳಗೊಂಡಂತೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಬಾಬು ಕೋರೆ ಹೇಳಿದರು.

ಮನೋಹರ ವಾಘ್ಮೋರೆ, ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜ ಪಾಟೀಲ, ಸಂಘಟನಾ ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಸಮಿತಿ ಸದ್ಯಸರಾದ ಶಿವಾನಂದ ತೋಳೆ, ಗಣಪತಿ ಮರಪಳ್ಳಿ, ಬಾಬಾಗೌಡ ಪಾಟೀಲ, ನಾಗಭೂಷಣ, ರಾಜಕುಮಾರ ಇಂಡಿ, ದೇವಿದಾಸ ರೆಡ್ಡಿ, ಪ್ರಶಾಂತ ಹೆಗ್ಗಿ, ಗಣೇಶ ಎ.ಜೆ ಸೇರಿದಂತೆ ಮಹಿಳಾ ನೌಕರರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.