ಕಲಬುರಗಿ: ಜಿಲ್ಲೆಯಲ್ಲಿ ಕೋಲಿ ಸಮಾಜದ ಜನರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿವೆ. ಆ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ ಆರಂಭವಾಯಿತು.
ಈ ವೇಳೆ ಪಕ್ಷ ಭೇದ ಮರೆತು ಕೋಲಿ ಸಮಾಜದ ವರಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಭಾಗವಹಿಸಿದ್ದ ಮುಖಂಡರು ಸರ್ಕಾರ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ‘ಜಿಲ್ಲೆಯಲ್ಲಿ ನಿರಂತವಾಗಿ ಹಿಂದುಳಿದ ಸಮಾಜದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಪ್ರಕರಣ ಒಂದರ ವಿಚಾರಣೆ ಸಂಬಂಧ ಕರೆ ತಂದಾಗ ವ್ಯಕ್ತಿಯ ಲಾಕ್‌ಆಪ್ ಡೆತ್ ಆಗಿದೆ. ಆದರೂ ಪೊಲೀಸರ ಮೇಲೆ ಕ್ರಮ ಕೈಗೊಂಡಿಲ್ಲ’ ಎಂದರು.
‘ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಲಗುರ್ತಿ ಗ್ರಾಮದ ಯುವಕನ್ನು ಪೊಲೀಸರು ಹೊಡೆದು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರ ಕೈವಾಡವಿದೆ. ಅವರ ವಿರುದ್ಧ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಭವಿಸಿ 65 ದಿನಗಳು ಕಳೆದರೂ ಸಹ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ’ ಎಂದು ದೂರಿದರು.
‘ಆರೋಪಿಗಳು ಸಚಿವರ ಜತೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಾರೆ. ಅವರು ಸಚಿವರ ಹಿಂಬಾಲಕರಾಗಿದ್ದು, ಅವರನ್ನು ಪೊಲೀಸರು ಬಂಧಿಸುವ ಧೈರ್ಯ ಮಾಡಿಲ್ಲ. ಹಾಗಾಗಿ ಗ್ರಾಮದಲ್ಲಿ ಕೊಡಲಿ, ಬಡಗಿ ಹಿಡಿದು ಮೃತರ ಕುಟುಂಬಸ್ಥರಿಗೆ ಹೆದರಿಕೆ ಹಾಕುತ್ತಿದ್ದಾರೆ’ ಎಂದು ದೂರಿದರು.
ದೂರುದಾರನಾದ ಕರಣಕುಮಾರ್ ನೀಡಿರುವ ಪುನರ್ ಹೇಳಿಕೆಯನ್ನು ಪರಿಗಣಿಸಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಮೃತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಮೃತರ ಕುಟುಂಬ, ಸಾಕ್ಷಿದಾರರು, ಸಾಕ್ಷಿದಾರರ ಕುಟುಂಬಕ್ಕೆ ಬೆದರಿಕೆ ಇದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಂಡು ಐನಾಪುರ, ಶರಣಪ್ಪ ತಳವಾರ, ಬಸವರಾಜ ಬೂದಿಹಾಳ, ಬಸವರಾಜ ಹರವಾಳ, ರಮೇಶ ನಾಟೀಕಾರ, ಸಂತೋಷ ತಳವಾರ, ಬಸವರಾಜ, ಮೋಹನ ಪಾಟೀಲ, ನಿಂಗಪ್ಪ ದೇವಣಗಾಂವ, ಸೂರ್ಯಕಾಂತ ಅವರಾದ, ಅವ್ವನಗೌಡ ಪಾಟೀಲ, ಶಾಂತಪ್ಪ ಕೂಡಿ, ಅಮೃತ ಡಿಗ್ಗಿ, ಮಲ್ಲು ಮರಗುತ್ತಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.