ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಗೊಂದಲ ನಿವಾರಿಸಲು ಪ್ರಿಯಾಂಕ್ ಖರ್ಗೆ ಆಗ್ರಹ

ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ
Last Updated 30 ಏಪ್ರಿಲ್ 2022, 3:58 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಹೀಗಿದ್ದರೂ ಸರ್ಕಾರ ತರಾತುರಿಯಲ್ಲಿ ಮರುಪರೀಕ್ಷೆ ನಡೆಸುವ ತೀರ್ಮಾನ ಮಾಡಿದೆ. ಇದು ಅಭ್ಯರ್ಥಿಗಳಲ್ಲಿ ಗೊಂದಲ ಉಂಟು ಮಾಡಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಸ್ಪಷ್ಟವಾಗಿಲ್ಲ. ದಿವ್ಯಾ ಹಾಗರಗಿ ಅವರ ಬಂಧನದ ದಿನವೇ ಮರು ಪರೀಕ್ಷೆಯ ನಿರ್ಧಾರ ಪ್ರಕಟಿಸಿದ್ದು ಏಕೆ? ಇನ್ನೂ ತನಿಖೆ ನಡೆಸಿದ್ದರೆ ಹೆಚ್ಚಿನ ಸಾಕ್ಷಾಧಾರಗಳು ಸಿಗುತ್ತಿದ್ದವು ಎಂದರು.ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ, ಈ ವರೆಗೆ ಏಳು ಜನ ಅಭ್ಯರ್ಥಿಗಳನ್ನು ಮಾತ್ರ ಬಂಧಿಸಲಾಗಿದೆ. ತನಿಖೆ ಪೂರ್ಣಗೊಳ್ಳದೆ ಇನ್ನೂ ಎಷ್ಟು ಜನ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಈಗಲೇ ಹೇಗೆ ಹೇಳಲು ಸಾಧ್ಯ ಎಂದರು.

ಪ್ರಶ್ನೆ ಪತ್ರಿಕೆ –1ರಲ್ಲಿಯೂ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ಗೃಹಸಚಿವರಿಗೆ ದೂರು ನೀಡಿದ್ದಾರೆ. ಕಲಬುರಗಿ, ಬೆಳಗಾವಿಯಲ್ಲಿ ನಡೆದ ದೇಹದಾರ್ಢ್ಯ ಪರೀಕ್ಷೆಯ ಸಂದರ್ಭದಲ್ಲಿ ಸಿ.ಸಿ ಟಿ.ವಿ ಕ್ಯಾಮೆರ ಅಳವಡಿಸಿರಲಿಲ್ಲ. ಅಭ್ಯರ್ಥಿಗಳ ಪರವಾಗಿ ಬೇರೆಯವರು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.‌‌

ಪರೀಕ್ಷಾ ಅಕ್ರಮದ ಬಗ್ಗೆ ಮಾತ್ರ ತನಿಖೆ ನಡೆಸಿ ಪ್ರಕರಣದ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಪರೀಕ್ಷಾ ಕೆಂದ್ರಗಳಲ್ಲಿ ನಡೆದ ಅಕ್ರಮದ ಬಗ್ಗೆಯೂ ತನಿಖೆ ಆಗಬೇಕು ಎಂದರು.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಅವರನ್ನು ಬಂಧಿಸಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುತ್ತಿದೆ ಎಂದರು.

ಆರ್‌.ಡಿ.ಪಾಟೀಲ, ದಿವ್ಯಾ ಹಾಗರಗಿ ಅವರ ಬಂಧನ ತನಿಖೆಯ ಮೊದನಲೇ ಹಂತವಷ್ಟೆ. ಈ ಪ್ರಕರಣದಲ್ಲಿ ಯಾರಿಗೆ ಹಣದ ಸಂದಾಯವಾಗಿದೆ. ಯಾರಿಂದ ಹಣ ವಸೂಲಿ ಮಾಡಲಾಗಿದೆ. ಎಲ್ಲೆಲ್ಲಿ ಅಕ್ರಮ ನಡೆದಿದೆ ಎಂಬುದನ್ನು ತನಿಖೆಯಿಂದ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ಸರಿಯಾದ ಮಾಹಿತಿ ಇಲ್ಲದೆ ನ್ಯಾಯಾಲಯದ ಮೊರೆ ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳಬಾರದು. ಸಾಧಕ ಬಾಧಕಗಳನ್ನು ನೋಡಿ ಮುಂದುವರಿಯಬೇಕು ಎಂದರು.

ಸಿಐಡಿಯ ಮೊದಲನೇ ನೋಟಿಸ್‌ಗೆ ಉತ್ತರ ನೀಡಿದ್ದೇನೆ. ಎರಡನೇ ನೋಟಿಸ್‌ಗೆ ಉತ್ತರಿಸಬೇಕಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಸಂತೋಷ ಪಾಟೀಲ ಧನ್ನೂರು, ಈರಣ್ಣ ಝಳಕಿ, ರಾಜೀವ್ ಜಾನೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT