ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಮರುಪರೀಕ್ಷೆ: ದಿವ್ಯಾ ಹಾಗರಗಿ ಬಂಧನದ ಬೆನ್ನಲ್ಲೇ ಸರ್ಕಾರದ ತೀರ್ಮಾನ

ಪರೀಕ್ಷಾ ಅಕ್ರಮ
Last Updated 29 ಏಪ್ರಿಲ್ 2022, 19:14 IST
ಅಕ್ಷರ ಗಾತ್ರ

ಬೆಂಗಳೂರು: ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆಯನ್ನೇ ರದ್ದುಪಡಿಸಿರುವ ಸರ್ಕಾರ, ಮರುಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಪರೀಕ್ಷಾ ಅಕ್ರಮದ ಸೂತ್ರಧಾರಿ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ ಆಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಪರೀಕ್ಷೆ ರದ್ದುಪಡಿಸಿರುವುದೂ ಚರ್ಚೆಗೆ ಗ್ರಾಸವಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ,‘ ಪಿಎಸ್‌ಐ ನೇಮಕಾತಿಗಾಗಿ ನಡೆಸಿದ್ದ ಪರೀಕ್ಷೆ ರದ್ದುಪಡಿಸಲಾಗಿದೆ. ಈ ಹಿಂದೆ ಪರೀಕ್ಷೆ ಬರೆದಿದ್ದ ಎಲ್ಲಾ 54,289 ಅಭ್ಯರ್ಥಿಗಳಿಗೆ ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ’ ಎಂದರು.

ಪರೀಕ್ಷೆಯನ್ನು ರದ್ದು ಮಾಡಿ, ಮರುಪರೀಕ್ಷೆ ನಡೆಸುವ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮರ್ಥಿಸಿಕೊಂಡಿದ್ದಾರೆ.

ಶೀಘ್ರವೇ ದಿನಾಂಕ ನಿಗದಿ: ‘ಪರೀಕ್ಷಾ ಅಕ್ರಮ ಸಂಬಂಧ ಸಿಐಡಿಯಿಂದ ಬಂಧಿತ ರಾದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. ಹೊಸಬರಿಗೂ ಅವಕಾಶ ಇಲ್ಲ. ಹಿಂದೆ ಪರೀಕ್ಷೆ ಬರೆದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಮರುಪರೀಕ್ಷೆ ದಿನಾಂಕವನ್ನು ಶೀಘ್ರವೇ ನಿಗದಿಪಡಿಸುತ್ತೇವೆ’ ಎಂದೂ ಜ್ಞಾನೇಂದ್ರ ತಿಳಿಸಿದರು.

‘ಈ ನಿರ್ಧಾರದಿಂದ ಅಕ್ರಮವಾಗಿ ನೇಮಕಾತಿ ಪಡೆದವರ ಜಾಗಕ್ಕೆ ಪ್ರತಿಭಾವಂತರು, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ. ಪರೀಕ್ಷಾ ಅಕ್ರಮಗಳು ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ನಡೆದಿರುವ ಬಗ್ಗೆಯೂ ಶಂಕೆ ಇರುವ ಕಾರಣ ಮರುಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಣಕ್ಕಾಗಿ ಹುದ್ದೆಗಳು ಎನ್ನುವ ದುಷ್ಟಾಲೋಚನೆ ಬಿಡಬೇಕು. ಅನೇಕ ಪರೀಕ್ಷೆಗಳಲ್ಲಿ ಇಂತಹ ಅಕ್ರಮಗಳು ನಡೆದಿವೆ. ಕಠಿಣ ನಿಯಮ ಜಾರಿಗೆ ತರುವುದರಿಂದ ಪರೀಕ್ಷೆಗಾಗಿ ಹೆಚ್ಚು ಪರಿಶ್ರಮ ಹಾಕಿದವರಿಗೆ ತೊಂದರೆ ಆಗುವುದಿಲ್ಲ. ಹಣವುಳ್ಳವರು ಮತ್ತು ಅಕ್ರಮ ಎಸಗುವವರು ಆಯ್ಕೆಯಾಗುವುದುನ್ನು ತಡೆಯಲು ಕಠಿಣ ನಿಯಮಾವಳಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಆರಗ ಹೇಳಿದರು.

ಪರೀಕ್ಷಾ ಅಕ್ರಮ ಎಸಗಲು ಹೊಸ ತಂತ್ರಗಳನ್ನು ಬಳಸುತ್ತಿದ್ದಲ್ಲಿ ಆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಯಾರೇ ತಪ್ಪಿಸ್ಥರಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮದ ಆರೋಪವಿದೆ ಎಂದೂ ತಿಳಿಸಿದರು.

ದಿವ್ಯಾ ಸೇರಿ ಆರು ಮಂದಿ ಬಂಧನ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಆರು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ದಿವ್ಯಾ ಒಡೆತನದ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಂದಾ, ಇವರೆಲ್ಲರಿಗೂ ಆಶ್ರಯ ನೀಡಿದ್ದ ಮಹಾರಾಷ್ಟ್ರದ ಸೊಲ್ಲಾಪುರದ ಮರಳು ಉದ್ಯಮಿಗಳಾದ ಸುರೇಶ ಕಾಟೇಗಾಂವ ಹಾಗೂ ಕಾಳಿದಾಸ, ಇವರ ಕಾರು ಚಾಲಕ ಸದ್ದಾಂ ಬಂಧಿತರು. ಹಗರಣದಲ್ಲಿ ಬಂಧಿತರ ಸಂಖ್ಯೆ 23ಕ್ಕೆ ಏರಿದೆ. ಮಹಾರಾಷ್ಟ್ರದ ಪುಣೆಯ ಹತ್ತಿರದ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ಇವರು ಊಟ ಮುಗಿಸಿ ಕುಳಿತಿದ್ದರು. ದಾಳಿ ನಡೆಸಿದ ಅಧಿಕಾರಿಗಳು ಅವರನ್ನು ಬಂಧಿಸಿ ಕರೆತಂದರು. ನ್ಯಾಯಾಲಯ ಈ ಆರು ಆರೋಪಿಗಳನ್ನು 11 ದಿನ ಸಿಐಡಿ ವಶಕ್ಕೆ ನೀಡಿದೆ.

ಮರುಪರೀಕ್ಷೆಗೆ ಎಚ್‌ಡಿಕೆ ವಿರೋಧ

ಹುಬ್ಬಳ್ಳಿ: ‘ಪಿಎಸ್ಐ ನೇಮಕಾತಿ‌ಯ ಭ್ರಷ್ಟಾಚಾರ ಕುರಿತು ತನಿಖೆ ನಡೆಯುತ್ತಿರುವಾಗಲೇ ಸರ್ಕಾರ ಮರುಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿದ್ದು ಸರಿಯಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ‌ ಕುಮಾರಸ್ವಾಮಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸರ್ಕಾರದ ನಿರ್ಧಾರದಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಮುಂದೆಯೂ ಸರ್ಕಾರ ಸರಿಯಾಗಿ ಪರೀಕ್ಷೆ ನಡೆಸುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ? ಯಾರೋ ಕೊಟ್ಟಿರುವ ದೂರಿನ ಆಧಾರದ ಮೇಲೆ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಬರಬಾರದಿತ್ತು’ ಎಂದರು.

‘ಈ ವ್ಯವಸ್ಥೆ ಸರಿಪಡಿಸದಿದ್ದರೆ ಕೇವಲ ದುಡ್ಡಿದ್ದವರಿಗೆ ಮಾತ್ರ ಉನ್ನತ ಹುದ್ದೆಗಳು ಸಿಗುತ್ತವೆ. ಹಣ ಕೊಟ್ಟು ಕೆಲಸ ಪಡೆದವರು ಬಡಜನರ ಪರವಾಗಿ ಕೆಲಸ ಮಾಡುತ್ತಾರೆ‌ಯೇ? ಈ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡುವೆ. ಅಕ್ರಮವೆಸಗಿದ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಆಗ್ರಹಿಸಿದರು.

ಅಭ್ಯರ್ಥಿಗಳ ಆಕ್ರೋಶ

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆಗೆ ಸಿಐಡಿ ಕಚೇರಿಗೆ ಶುಕ್ರವಾರ ಬಂದಿದ್ದ ಅಭ್ಯರ್ಥಿಗಳು, ಮರುಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT