ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಹಿಂದಿನ ದಿನವೇ ಬ್ಲೂಟೂತ್ ಇಡುತ್ತಿದ್ದ ಪ್ರಭು

Last Updated 3 ಮೇ 2022, 11:18 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾದ ಪ್ರಭು ಶರಣಪ್ಪ ಅವರನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು.

ಇಲ್ಲಿನ ಎಂ.ಎಸ್.ಇರಾನಿ ಪದವಿ ಕಾಲೇಜಿನಲ್ಲಿ ತೆರೆದ ಪರೀಕ್ಷಾ ಕೇಂದ್ರದಲ್ಲಿ ಪ್ರಭು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೋಣೆಯ ಪಕ್ಕದಲ್ಲಿಯೇ ಇರುವ ಹೂವಿನ ಕುಂಡದಲ್ಲಿ, ಪರೀಕ್ಷೆಯ ಹಿಂದಿನ ದಿನವೇ (2021 ಅಕ್ಟೋಬರ್ 2) ಬ್ಲೂಟೂತ್ ಡಿವೈಸ್ ಇಟ್ಟು ಬಂದಿದ್ದರು.

ಪರೀಕ್ಷೆಯ ದಿನ ತಪಾಸಣೆ ಮಾಡುತ್ತಾರೆ. ಆಗ ಮೆಟಲ್ ಡಿಟೆಕ್ಟರ್ನಲ್ಲಿ ಡಿವೈಸರ್ ಪತ್ತೆಯಾಗುತ್ತದೆ ಎಂಬ ಕಾರಣಕ್ಕೆ, ಅದನ್ನು ಹಿಂದಿನ ದಿನವೇ ಹೂವಿನ ಕುಂಡದಲ್ಲಿ ಇಟ್ಟು ಬಂದಿದ್ದಾರೆ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ.

ಈ ಹೂವಿನ ಕುಂಡ ಪರೀಕ್ಷಾ ಕೋಣೆಯಿಂದ 20 ಮೀಟರ್ ದೂರದಲ್ಲಿ ಇತ್ತು. ಅಲ್ಲಿ ಇಟ್ಟುಬಂದಿದ್ದ ಎಲೆಕ್ಟ್ರಾನಿಕ್ ಉಪಕರಣವನ್ನು ಪರೀಕ್ಷಾ ದಿನ ಎತ್ತಿಕೊಂಡು ಒಳ ಉಡುಪಿಯಲ್ಲಿ ಇಟ್ಟುಕೊಂಡಿದ್ದರು. ಕಿವಿಯಲ್ಲಿ ಸಣ್ಣ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆ ಬರೆದಿದ್ದಾಗಿ, ಆರೋಪಿ ಮಹಜರ ವೇಳೆ ಒಪ್ಪಿಕೊಂಡರು.

ಈ ಕಾಲೇಜಿನಲ್ಲಿರುವ ಕಂಪ್ಯೂಟರ್ ಕೋಣೆಯಲ್ಲಿ ಪ್ರಭು ಹಾಲ್ ಟಿಕೆಟ್ ನಂಬರ್ ಬಂದಿತ್ತು. ಸ್ಥಳಕ್ಕೆ ಕರೆತಂದ ಪೊಲೀಸರಿಗೆ ಪ್ರಭು ಪ್ರತಿಯೊಂದು ಸ್ಥಳವನ್ನು ತೋರಿಸಿ, ಹೇಗೆ ವಾಮಮಾರ್ಗದಿಂದ ಪರೀಕ್ಷೆ ಪಾಸಾದೆ ಎಂಬುದನ್ನು ವಿವರಿಸಿದರು.

ನಿವೇಶನ ಮಾರಿ ಹಣ ಕೊಟ್ಟಿದ್ದ ತಂದೆ:ಹೇಗಾದರೂ ಮಾಡಿ ಮಗನನ್ನು ಪಿಎಸ್ಐ ಮಾಡಬೇಕು ಎಂಬ ಹಂಬಲದಿಂದ, ಪ್ರಭು ಅವರ ತಂದೆ ಶರಣಪ್ಪ ₹ 50 ಲಕ್ಷ ಹಣ ನೀಡಿದ್ದಾರೆ. ಹಣ ಹೊಂದಿಸಲು ನಗರದಲ್ಲಿದ್ದ ತಮ್ಮ ನಿವೇಶನ ಮಾರಾಟ ಮಾಡಿದ್ದಾರೆ. ಪರೀಕ್ಷೆಗೂ ಮುನ್ನ ₹ 20 ಲಕ್ಷ, ಫಲಿತಾಂಶ ಬಂದ ಮೇಲೆ ₹ 30 ಲಕ್ಷ ನೀಡಿದ್ದಾಗಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಈ ಅಕ್ರಮ ಎಸಗಿದ ಆರೋಪದಡಿ ಮಗನೊಂದಿಗೆ ಶರಣಪ್ಪ ಕೂಡ ಬಂಧಿತರಾಗಿದ್ದಾರೆ.

ರುದ್ರಗೌಡ ಜತೆ ಸಂಪರ್ಕ ಹೇಗೆ ಬಂತು?:

ಶರಣಪ್ಪ ಅವರು ಹಲವು ವರ್ಷಗಳಿಂದ ನಗರದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪೂರೈಸುವ ವ್ಯಾಪಾರ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರಿನಲ್ಲಿ ಚಂದ್ರಕಾಂತ ಕುಲಕರ್ಣಿ ಹೊಸ ಮನೆ ಕಟ್ಟುತ್ತಿದ್ದರು. ಈ ವೇಳೆ ಶರಣಪ್ಪ ಹಾಗೂ ಚಂದ್ರಕಾಂತಗೆ ಪರಿಚಯ ಆಗಿತ್ತು.

ಮಗನನ್ನು ಪಿಎಸ್ಐ ಮಾಡುವ ವಿಚಾರವನ್ನು ಶರಣಪ್ಪ ಅವರು ಚಂದ್ರಕಾಂತ ಮುಂದೆ ಹೇಳಿದ್ದರು. ಇನ್ನೊಂದೆಡೆ ಚಂದ್ರಕಾಂತ ಹಾಗೂ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಮೊದಲಿನಿಂದಲೂ ಪರಿಚಯಸ್ಧರು. ಹೀಗಾಗಿ ರುದ್ರಗೌಡ ಪಾಟೀಲ ಅವರನ್ನು ಚಂದ್ರಕಾಂತ ಶರಣಪ್ಪನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಮೂವರೂ ಮಾತನಾಡಿಕೊಂಡು ₹50 ಲಕ್ಷಕ್ಕೆ ಡೀಲ್ ಮಾಡಿದ್ದರು ಎಂಬುದು ಅಧಿಕಾರಿಗಳ ಮಾಹಿತಿ.

ಸ್ಟೇಷನ್ ಬಜಾರ್ ಠಾಣೆ ಸಿಪಿಐ ಸಿದ್ದರಾಮೇಶ ಗಡೇದ ನೇತೃತ್ವದಲ್ಲಿ ಮಹಜರು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT