ಕಲಬುರಗಿ: ದೇಶ ತುಂಡು ಮಾಡಿದವರಿಂದ ಜೋಡೊ ಯಾತ್ರೆ; ಪುಷ್ಪೇಂದ್ರ

ಕಲಬುರಗಿ: ’ಅಖಂಡ ಭಾರತ ತುಂಡು ಮಾಡಿದವರಿಂದ ಭಾರತ ಜೋಡೊ ಯಾತ್ರೆ ನಡೆಯಿತು. ಯಾತ್ರೆಯಲ್ಲಿ ದೊಡ್ಡವರು, ಮಹಾನ್ ವ್ಯಕ್ತಿಗಳು ಕೈಜೋಡಿಸಿ ಹೆಜ್ಜೆ ಹಾಕಿದ್ದಾರೆ’ ಎಂದು ಹಿಂದುತ್ವವಾದಿ ಪುಷ್ಪೇಂದ್ರ ಕುಲಶ್ರೇಷ್ಠ ವ್ಯಂಗ್ಯವಾಡಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಜಾಗರಣ ಮಂಚ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದೂ ಧರ್ಮದ ಜಾಗೃತಿಯ ಸಂಘಟನಾತ್ಮಕ ಚಟುವಟಿಕೆಗಳು ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿ ಹೆಚ್ಚು ಜರುಗಿವೆ. ಸತ್ಯ ನುಡಿಯಲು ಹಿಂದೇಟು ಹಾಕುವವರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಹಿಂದೂ ಸಮಾಜದ ಮಧ್ಯದಲ್ಲಿ ಇಂದಿಗೂ ಕೆಲ ದುರಾಸೆಯ ಜನರಿದ್ದಾರೆ. ಅಂತಹ ಜನರಿಂದ ದೂರ ಇರುವುದು ಅವಶ್ಯ. ಹಿಂದೂಗಳ ಮನಸ್ಸಿನಲ್ಲಿ ನಾವು, ನಮ್ಮವರು ಎಂಬ ಭಾವನೆ ನೆಲೆಯೂರಬೇಕು’ ಎಂದರು.
‘ಭಾರತ ಮಾತೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಅವಳ ರಕ್ಷಣೆ ಹಾಗೂ ಸೇವೆಗೆ ಸದಾ ಸಿದ್ಧರಿರಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ಅರಿತು ಕೊಂಡವನಿಗೆ ಉಳಿಗಾಲವಿದೆ. ಈಗಲೂ ಸಂಸ್ಕೃತಿ ಹಾಗೂ ಪರಂಪರೆ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಅವುಗಳನ್ನು ಮೆಟ್ಟಿ ನಿಲ್ಲಬೇಕು’ ಎಂದು ಅವರು ಹೇಳಿದರು.
ಲಿಂಗರಾಜಪ್ಪ ಅಪ್ಪ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮಡು, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಮುಖಂಡರಾದ ಹರ್ಷಾನಂದ ಗುತ್ತೇದಾರ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಅನಿಲ ತಂಬಾಕೆ, ಉಮೇಶ ಪಾಟೀಲ, ಸುಧಾ ಹಾಲಕಾಯಿ, ಮಹಾದೇವಯ್ಯಾ ಕರದಳ್ಳಿ, ಅಶ್ವಿನ್ ಕುಮಾರ್, ಪ್ರಶಾಂತ ಗುಡ್ಡಾ, ಪಾಲಿಕೆ ಸದಸ್ಯರಾದ ಸಚಿನ್ ಕಡಗಂಚಿ, ಶಿವಾನಂದ ಪಿಸ್ತಿ, ರವೀಂದ್ರ ಮುತ್ತಿನ, ಸೂರ್ಯಕಾಂತ ಹಾರಕೂಡ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.