ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಲಬುರ್ಗಿ ರೈಲ್ವೆ ವಿಭಾಗ ಎಂಬ ಕನ್ನಡಿಯೊಳಗಿನ ಗಂಟು

Last Updated 24 ನವೆಂಬರ್ 2020, 16:25 IST
ಅಕ್ಷರ ಗಾತ್ರ

ಕಲಬುರ್ಗಿ ರೈಲ್ವೆ ವಿಭಾಗ ಸ್ಥಾಪನೆಯ ವಿಷಯ ಚುನಾವಣೆ ಬಂದಾಗ ಚರ್ಚೆಗೆ ಬರುತ್ತದೆ. ಆ ನಂತರರಾಜಕಾರಣಿಗಳಿಗೆ ಮರತೇ ಹೋಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರೈಲ್ವೆ ವಿಭಾಗ ಸ್ಥಾಪನೆಯಾಗಿ ಈಗ ಐದು ವರ್ಷ ಕಳೆಯಬೇಕಿತ್ತು. ಸಿಮೆಂಟ್‌ ಕಂಪನಿಗಳಿಂದಾಗಿ ಸರಕು ಸಾಗಣೆ ಹೆಚ್ಚಿರುವ ಕಾರಣ ರೈಲ್ವೆಗೆ ಹೆಚ್ಚು ಆದಾಯ ತಂದುಕೊಡುತ್ತಿರುವ ಕಲಬುರ್ಗಿ ಈಗ ರೈಲ್ವೆಯ ಪ್ರಮುಖ ಕೇಂದ್ರವಾಗಬೇಕಿತ್ತು.

ಕಲಬುರ್ಗಿ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆಕೇಂದ್ರದ ಯುಪಿಎ–2 ಸರ್ಕಾರದಲ್ಲಿ ಸಚಿವರಾಗಿದ್ದರು. ಕೊನೆ ಹಂತದಲ್ಲಿ ಅವರಿಗೆ ರೈಲ್ವೆ ಖಾತೆ ನೀಡಲಾಯಿತು. 2014ರ ಫೆಬ್ರುವರಿಯಲ್ಲಿ ಕಲಬುರ್ಗಿಯಲ್ಲಿ ಹೊಸ ರೈಲ್ವೆ ವಿಭಾಗ ಕಚೇರಿ ಸ್ಥಾಪನೆಯನ್ನು ಅವರು ಘೋಷಿಸಿದ್ದರು.

ಕಲಬುರ್ಗಿಯು ರೈಲ್ವೆ ವಿಭಾಗದ ಸ್ಥಾಪನೆಗೆ ಎಲ್ಲ ರೀತಿಯಿಂದಲೂ ಅರ್ಹತೆ ಹೊಂದಿರುವ ಸ್ಥಳ. 1984ರಲ್ಲಿಯೇ ನ್ಯಾಯಮೂರ್ತಿ ಸರಿನ್‌ ಸಮಿತಿ ಸಹ ಕಲಬುರ್ಗಿ ರೈಲ್ವೆ ವಿಭಾಗ ಸ್ಥಾಪಿಸುವಂತೆ ಶಿಫಾರಸು ಮಾಡಿತ್ತು. ಈ ಸಮಿತಿಯ ಬಹುತೇಕ ಶಿಫಾರಸುಗಳು ಅನುಷ್ಠಾನಗೊಂಡವು. ಆದರೆ,ಕಲಬುರ್ಗಿಯ ಬೇಡಿಕೆಅನುಷ್ಠಾನಗೊಳ್ಳಲೇ ಇಲ್ಲ.

2003–04ರಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕಲಬುರ್ಗಿ ರೈಲ್ವೆ ವಿಭಾಗ ಘೋಷಿಸುವ ಪ್ರಸ್ತಾವ ರೂಪಿಸಲಾಯಿತಾದರೂ, ಕೊನೆ ಹಂತದಲ್ಲಿ ಅದನ್ನು ಕೈಬಿಡಲಾಯಿತು.

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಪ್ರಕ್ರಿಯೆಗಳು ಚುರುಕಿನಿಂದ ನಡೆದವು. 2014ರ ಫೆಬ್ರುವರಿಯಲ್ಲಿ ಘೋಷಣೆ ಮಾಡಿದ ಒಂದೇ ತಿಂಗಳಲ್ಲಿ ಅಂದರೆ ಮಾರ್ಚ್‌ನಲ್ಲಿ ಕಲಬುರ್ಗಿ ನಗರದಲ್ಲಿಯ 37 ಎಕರೆ ಜಮೀನನ್ನು ರೈಲ್ವೆಗೆ ಹಸ್ತಾಂತರಿಸಲಾಯಿತು. ಈ ವಿಭಾಗದ ಚಟುವಟಿಕೆ ಆರಂಭಿಸಲು ವಿಶೇಷ ಅಧಿಕಾರಿಯನ್ನೂ ನೇಮಿಸಲಾಯಿತು. ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈರುತ್ಯ ರೈಲ್ವೆ ಅಡಿಯಲ್ಲಿ ಕಲಬುರ್ಗಿ ವಿಭಾಗ ಆರಂಭಿಸಬಹುದು ಎಂದು ವಿಶೇಷ ಅಧಿಕಾರಿಯು ಏಪ್ರಿಲ್‌ ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದರು. ರೈಲ್ವೆ ಮಂಡಳಿ ಅದಕ್ಕೆ ಒಪ್ಪಿಗೆಯನ್ನೂ ಸೂಚಿಸಿತ್ತು.

ಆದರೆ, ರೈಲ್ವೆ ಸಚಿವ ಸ್ಥಾನದಿಂದ ಖರ್ಗೆ ನಿರ್ಗಮಿಸಿದ ನಂತರ ಎಲ್ಲವೂ ಸ್ಥಗಿತಗೊಂಡುಬಿಟ್ಟಿತು!

ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವು ದಕ್ಷಿಣ ಮಧ್ಯ ರೈಲ್ವೆ, ಸೆಂಟ್ರಲ್‌ ರೈಲ್ವೆ ಮತ್ತು ನೈರುತ್ಯ ರೈಲ್ವೆಗಳ ವ್ಯಾಪ್ತಿಗೊಳಪಟ್ಟಿವೆ.ಸೊಲ್ಲಾಪುರ, ಗುಂತಕಲ್‌, ಸಿಕಂದರಾಬಾದ್‌, ಹೈದರಾಬಾದ್‌ ಮತ್ತು ಹುಬ್ಬಳ್ಳಿ ಹೀಗೆ ಐದು ರೈಲ್ವೆ ವಿಭಾಗಗಳಲ್ಲಿ ಈ ಜಿಲ್ಲೆಗಳು ಹರಿದು ಹಂಚಿ ಹೋಗಿವೆ.

ಈ ಭಾಗದಲ್ಲಿ 12ಕ್ಕೂ ಹೆಚ್ಚು ಸಿಮೆಂಟ್‌ ಕಾರ್ಖಾನೆಗಳಿವೆ. ಸೊಲ್ಲಾಪುರ ವಿಭಾಗದ ಒಟ್ಟು ಆದಾಯದಲ್ಲಿ ಶೇ 50ರಷ್ಟು ಪಾಲನ್ನು ವಾಡಿ ಮತ್ತು ಕಲಬುರ್ಗಿ ರೈಲು ನಿಲ್ದಾಣಗಳು ತಂದುಕೊಡುತ್ತಿವೆ. ಬೆಂಗಳೂರು, ಯಶವಂತಪುರ, ಮಂಗಳೂರು ನಂತರ ಕಲಬುರ್ಗಿ ರೈಲು ನಿಲ್ದಾಣವು ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ಗಳಿಸುವ ನಾಲ್ಕನೇ ನಿಲ್ದಾಣವಾಗಿದೆ ಎನ್ನುತ್ತಾರೆ ಇಲ್ಲಿಯ ವಾಣಿಜ್ಯೋದ್ಯಮಿಗಳು.

ಪ್ರತಿ ರೈಲ್ವೆ ವಿಭಾಗವು ಅಪಘಾತ ಪರಿಹಾರ ರೈಲುಗಳು, ಡೀಸೆಲ್‌ ಲೊಕೊಮೊಟಿವ್‌ ಶೆಡ್‌ಗಳು, ಎಲೆಕ್ಟ್ರಿಕ್‌ ಲೊಕೊಮೊಟಿವ್‌ ಶೆಡ್‌, ಕೋಚಿಂಗ್‌ ಡಿಪೊಗಳನ್ನು ಹೊಂದಿರುತ್ತವೆ. ಅಲ್ಲದೇ ಹೊಸ ರೈಲು ಆರಂಭಿಸುವ ಮತ್ತು ಯಾವ ರೈಲು ನಿಲ್ದಾಣಕ್ಕೆ ಎಷ್ಟು ಸೀಟುಗಳ ಕೋಟಾ ನಿಗದಿ ಮಾಡಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುತ್ತವೆ. ಹೀಗಾಗಿ ರೈಲ್ವೆ ವಿಭಾಗ ಸ್ಥಾಪನೆ ಈ ಭಾಗದಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ತಂದುಕೊಡಲಿದೆ.

ಕಲಬುರ್ಗಿ ರೈಲ್ವೆ ವಿಭಾಗ ಸ್ಥಾಪನೆ ತಮ್ಮ ಆದ್ಯತೆಯ ವಿಷಯ ಎಂದು ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಸಹ ಹೇಳುತ್ತಾರೆ. ‘ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಕಲಬುರ್ಗಿ ರೈಲ್ವೆ ವಿಭಾಗ ಸ್ಥಾಪನೆಗೆ ಸಂಬಂಧಿಸಿದಂತೆ ಆಂತರಿಕ ಸಮಿತಿ ರಚಿಸಿದ್ದರು. ದುರದೃಷ್ಟವಶಾತ್‌ ಅವರು ಕೋವಿಡ್‌ನಿಂದ ನಿಧನರಾದರು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ನಾವು ಮಾಡುತ್ತಿದ್ದೇವೆ’ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT