ಅಫಜಲಪುರ: ತಾಲ್ಲೂಕಿನ ಬಂದರವಾಡ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದರಿಂದ ಮಹಿಳೆಯರು ಮಕ್ಕಳು ದಿನಗಟ್ಟಲೇ ತುಂತುರು ಮಳೆಯಲ್ಲಿ ಕೊಳವೆಬಾವಿ ಮುಂದೆ ನೀರಿಗಾಗಿ ಕಾಯ್ದರು. ವಿದ್ಯುತ್ ಬರದ ಕಾರಣ ಬೇಸತ್ತು ಕೆಲವರು ಮನೆಗೆ ತೆರಳಿದರು.
ಬಂದರವಾಡ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಿದ್ದು ಹೆಚ್ಚಿನ ಜನರು ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದರಿಂದ ನೀರಿಗಾಗಿ ಪರದಾಟ ಆರಂಭವಾಗಿದೆ.
ವಿದ್ಯುತ್ ಸಮಸ್ಯೆ ಕುರಿತು ಗ್ರಾಮದವರಾದ ತಾಲ್ಲೂಕು ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಕಟ್ಟಿಮನಿ ಮಾಹಿತಿ ನೀಡಿ, ‘ಬಂದರವಾಡ ಗ್ರಾಮವು ಚೌಡಾಪುರ ಜೆಸ್ಕಾಂ ವಲಯಕ್ಕೆ ಬರುತ್ತದೆ. ಆದರೆ ವಿದ್ಯುತ್ ಸ್ಥಗಿತವಾದರೆ ಯಾರು ಅದನ್ನು ದುರಸ್ತಿ ಮಾಡುವುದಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜೆಸ್ಕಾಂದವರು ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾದರೆ ತಕ್ಷಣ ದುರಸ್ತಿ ಮಾಡಬೇಕು. ಅಲ್ಲಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿ ಪಡಿಸಬೇಕು, ಗಿಡಗಂಟಿಗಳನ್ನು ಕಡಿದು ಹಾಕಬೇಕು. ಬಾಗಿರುವ ಕಂಬಗಳನ್ನು ಸರಿಪಡಿಸಬೇಕು. ಇವೆಲ್ಲಾ ಮಾಡಿದರೆ ವಿದ್ಯುತ್ ಪೂರೈಕೆ ಸ್ಥಗಿತವಾಗುವದಿಲ್ಲ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.