ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಯಿ ಕನಸು ನನಸು ಮಾಡುವುದೇ ಸಂಸ್ಕಾರ: ಬಾಳಾಸಾಹೇಬ್ ಲೋಕಾಪುರ

ಹಿರಿಯ ಸಾಹಿತಿ ಬಾಳಾಸಾಹೇಬ್ ಲೋಕಾಪುರ ಅಭಿಮತ
Published : 11 ಸೆಪ್ಟೆಂಬರ್ 2024, 5:43 IST
Last Updated : 11 ಸೆಪ್ಟೆಂಬರ್ 2024, 5:43 IST
ಫಾಲೋ ಮಾಡಿ
Comments

ಕಲಬುರಗಿ: ‘ಸೃಷ್ಟಿಯ ಮೂಲ ತಾಯಿ. ತಾಯಿ ಎಲ್ಲರ ಮನದಾಳದಲ್ಲಿದ್ದಾಳೆ. ತಾಯಿ ಕಂಡ ಕನಸನ್ನು ನನಸು ಮಾಡುವುದೇ ನಿಜವಾದ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿ. ಎಲ್ಲರ ಮನದಲ್ಲಿ ಈ ಮನೋಭಾವ ರೂಢಿಯಾದರೆ ಸಾಮಾಜಿಕ ಮೌಲ್ಯ ಬೆಳೆದು ಸಮಾಜ ಉದ್ದಾರವಾಗುತ್ತದೆ’ ಎಂದು ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಬಾಳಾಸಾಹೇಬ್ ಲೋಕಾಪುರ ಹೇಳಿದರು.   

ಕಲಬುರಗಿ ಜನರಂಗವು ದಿ. ಗೌರಮ್ಮ ರುದ್ರಯ್ಯ ಘಂಟಿ ಸ್ಮರಣಾರ್ಥ ಶ್ರೀಮತಿ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ರಕ್ತ ವಿಲಾಪ’ ನಾಟಕದ ರಂಗ ಪ್ರಯೋಗ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಟಕ ಮಾಡುವುದು ಸರಳವಲ್ಲ. ಜನರಂಗದ ರೂವಾರಿ ಶಂಕ್ರಯ್ಯ ಘಂಟಿ 50 ನಾಟಕಗಳನ್ನು ನಿರ್ದೇಶಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಜನರಂಗದ ಮೂಲಕ ಮೌಲ್ಯಯುತ ನಾಟಕ ಪ್ರಯೋಗಗಳನ್ನು ಸಾಂಸ್ಕೃತಿಕ ಮನಸ್ಸಿನಿಂದ ಸಮಾಜಕ್ಕೆ ನೀಡಿದ್ದಾರೆ. ಆಯಾ ನೆಲದ ಕಲಾವಿದರು ಮಾಡಲೇಬೇಕಾದ ಸಾಂಸ್ಕೃತಿಕ ಹೊಣೆಗಾರಿಕೆ’ ಎಂದರು.

ಲಿಂಗಸಗೂರು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಧಿಕಾರಿ ಬಸಂತರಾಯ ಮಾತನಾಡಿ, ‘ಈ ನೆಲದಲ್ಲಿ ಬೆಳೆದು ಮರಳಿ ಹೋಗುವ ಮುನ್ನ ಇದೇ ನೆಲಕ್ಕೆ ಏನಾದರೂ ಕೊಟ್ಟು ಹೋಗುವ ಕಾಳಜಿ ಸಂವೇದನಾಶೀಲ ಕಲಾವಿದರು, ಕವಿ, ಸಾಹಿತಿಗಳಿಗೆ ನಿಸ್ವಾರ್ಥ ಚಿಂತನೆಯಿರಬೇಕು’ ಎಂದರು. 

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಮಾತನಾಡಿ, ‘ನಾಟಕ ಭಿನ್ನ ಭಾವ ಮತ್ತು ಅಭಿರುಚಿ ಪ್ರೇಕ್ಷಕರನ್ನು ಗುಣಾತ್ಮಕ ಮತ್ತು ಪರಿಣಾಮಕಾರಿಯಾಗಿ ತಲುಪುತ್ತದೆ. ನಾಟಕವನ್ನು ಕಡಿಮೆ ಪಾತ್ರಧಾರಿಗಳಿಂದ ಅಚ್ಚುಕಟ್ಟಾಗಿ ರೂಪಿಸಿ ಪ್ರದರ್ಶಿಸಿದ್ದಾರೆ’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವಿ.ಜಿ. ಅಂದಾನಿ ಮಾತನಾಡಿ, ‘ಒಬ್ಬ ಲೇಖಕ ಸಾಹಿತ್ಯ ಪ್ರಕಾರವಾಗಿ ನಾಟಕ ಬರೆದರೆ ಒಬ್ಬ ನಿರ್ದೇಶಕ ಭಿನ್ನ ನೆಲೆಯಲ್ಲಿ ನಾಟಕ ಮಾಧ್ಯಮದ ಮೂಲಕ ಪ್ರದರ್ಶನ ರೂಪಿಸುತ್ತಾನೆ. 'ಕವಿ ಕಾಣದನ್ನು ರವಿ ಕಂಡಂತೆ' ಎಂಬ ವೈಚಾರಿಕ ನೆಲೆಯಲ್ಲಿ ಹೊಸ ವಿಚಾರಗಳನ್ನು ಸಮಾಜಕ್ಕೆ ನೀಡುತ್ತಾನೆ. ಅದು ನಾಟಕ ಮಾಧ್ಯಮಕ್ಕೆ ಇರುವ ಸತ್ವ ಮತ್ತು ಜೀವಸೆಲೆ’ ಎಂದರು.

ಜನರಂಗ ಅಧ್ಯಕ್ಷ ಶಂಕ್ರಯ್ಯ ಆರ್. ಘಂಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಜೀಮ್ ಪಾಷಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ, ಕಥೆಗಾರ್ತಿ ಸಂಧ್ಯಾ ಹೋನಗುಂಟಿಕರ್, ಡಾ. ವಿಜಯಕುಮಾರ್, ರಾಘವೇಂದ್ರ ಹಳಿಪೇಟ್, ಬಾಬುರಾವ್, ಮಲ್ಲಿಕಾರ್ಜುನ್, ಬಿ.ಎನ್. ರುದ್ರವಾಡಿ, ಮಲ್ಲಿಕಾರ್ಜುನ್, ಹಿರಿಯ ಚಿತ್ರಕಲಾವಿದ ವಿ.ಬಿ. ಬಿರಾದಾರ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್, ಪ್ರಭಾಕರ ಜೋಶಿ, ಸಿದ್ದು ಮರಗೋಳ ಸೇರಿದಂತೆ ಮುಂತಾದವರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT