ಸೋಮವಾರ, ಜನವರಿ 27, 2020
21 °C
ಮಾಗಣಗೇರಿ ಬೃಹನ್ಮಠದ ಜಾತ್ರಾ ಮಹೋತ್ಸವದಲ್ಲಿ ರಂಭಾಪುರಿ ಸ್ವಾಮೀಜಿ

ಶಾಂತಿ ಬದುಕಿಗೆ ಧರ್ಮಾಚರಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ‘ಭೌತಿಕ ಬದುಕಿನಲ್ಲಿ ಸಂಪತ್ತು ಎಷ್ಟಿದ್ದರೂ ಶಾಂತಿ ನೆಮ್ಮದಿ ಸಿಗದು. ಮಾನವ ಜೀವನ ಉನ್ನತಿಗೆ ಧರ್ಮವೊಂದೇ ಆಶಾ ಕಿರಣ. ಶಾಂತಿ ಮತ್ತು ಸಾಮರಸ್ಯ ಬದುಕಿಗೆ ಧರ್ಮಾಚರಣೆಯ ಅಗತ್ಯವಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ರೇಣುಕ ಪ್ರಸನ್ನ ಡಾ.ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾಗಣಗೇರಿ ಬೃಹನ್ಮಠದ ಜಾತ್ರಾ ಮಹೊತ್ಸವ, ಲಿಂ. ಗುರು ಚನ್ನವೃಷಭೇಂದ್ರ–ಅಯ್ಯಪ್ಪಯ್ಯ ಶ್ರೀಗಳವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಜನಸಮುದಾಯದಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ. ಸತ್ಯ ಸಂಸ್ಕೃತಿ ಸಭ್ಯತೆ ಸಂಸ್ಕಾರ ಸದ್ವಿನಯ ಗುಣಗಳನ್ನು ಬೆಳೆಸಬೇಕಾಗಿದೆ. ಈ ದಾರಿಯಲ್ಲಿ ಮೊದಲಿನಿಂದಲೂ ಗುರು ಮಠಗಳು ಕಾರ್ಯ ನಿರ್ವಹಿಸುತ್ತಾ ಬಂದಿವೆ. ವೀರಶೈವ ಧರ್ಮ ಸಕಲರಿಗೂ ಹಿತವನ್ನು ಬಯಸುವುದಾಗಿದೆ. ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ವಿಧ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಹುಟ್ಟು ಸಾವುಗಳು ಸಹಜವಾದರೂ ಬಾಳಿ ಬದುಕುವ ಮಧ್ಯದ ಬಾಳು ಸಮೃದ್ಧಗೊಳ್ಳಲು ಶ್ರಮಿಸಬೇಕಾಗುತ್ತದೆ. ಆಧುನಿಕತೆ ಹೆಸರಿನಲ್ಲಿ ಧರ್ಮ ಸಂಸ್ಕೃತಿಗಳು ನಾಶಗೊಳ್ಳಬಾರದು. ಮನದ ಶಾಂತಿ ಜೀವನ ಶ್ರೇಯಸ್ಸಿಗೆ ಧರ್ಮವೇ ಮೂಲವಾಗಿದೆ. ಮಾಗಣಗೇರಿ ಬೃಹನ್ಮಠ ಈ ಭಾಗದಲ್ಲಿ ಧರ್ಮ ಮತ್ತು ಸಮಾಜ ಮುಖಿಯಾಗಿ ಕಾರ್ಯ ಮಾಡುತ್ತಾ ಬಂದಿದೆ. ಇಂದಿನ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸರ್ವ ಜನಾಂಗದ ಉನ್ನತಿಗೆ ಶ್ರಮಿಸುತ್ತಿರುವುದು ಸಂತಸ ತಂದಿದೆ’ ಎಂದು ಶ್ಲಾಘಿಸಿದರು. 

ಮುಖ್ಯ ಅತಿಥಿಯಾಗಿದ್ದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಮೂಲ್ಯವಾದುದು ಎಂದರು.

ಹಲವಾರು ಗಣ್ಯರು, ದಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನೇತೃತ್ವ ವಹಿಸಿದ್ದ ಮಾಗಣಗೇರಿ ಬೃಹನ್ಮಠದ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮದ ತಳಹದಿಯ ಮೇಲೆ ಜೀವನ ಬೆಳೆಸಿಕೊಳ್ಳಬೇಕು. ಸಂಸ್ಕಾರ ಸಂಸ್ಕೃತಿ ಇಲ್ಲದ ಬದುಕು ವ್ಯರ್ಥ. ರೇಣುಕಾಚಾರ್ಯರು ಬೋಧಿಸಿದ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರಬೇಕೆಂದರು.

ಸಮಾರಂಭದಲ್ಲಿ ನರಸಾಪುರದ ಮರುಳಸಿದ್ಧ ಶಿವಾಚಾರ್ಯರು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯರು, ನೀಲಗಲ್ಲಿನ ಪಂಚಾಕ್ಷರಿ ಶಿವಾಚಾರ್ಯರು, ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಕೆಂಭಾವಿಯ ಚನ್ನಬಸವಸ್ವಾಮಿಗಳು ಸೇರಿದಂತೆ ಅನೇಕ ಶ್ರೀಗಳು ಪಾಲ್ಗೊಂಡಿದ್ದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು