ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಾಯಣ ಸುಪರ್ದಿಗೆ ಸ್ವಾತಂತ್ರ್ಯ ಹೋರಾಟಗಾರರ ಭವನ’; ಸಚಿವ ಸುನೀಲ್ ಕುಮಾರ್

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್ ಭರವಸೆ
Last Updated 8 ಸೆಪ್ಟೆಂಬರ್ 2021, 15:24 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಂಗಾಯಣವನ್ನು ಆರಂಭಿಸಲಾಗಿದ್ದು, ರಂಗಭೂಮಿ ಚಟುವಟಿಕೆಗಳಿಗೆ ಇನ್ನಷ್ಟು ವೇಗ ನೀಡುವ ಉದ್ದೇಶದಿಂದ ರಂಗಾಯಣ ಆವರಣದಲ್ಲೇ ಇರುವ ಸ್ವಾತಂತ್ರ್ಯ ಹೋರಾಟಗಾರರ ಭವನವನ್ನು ರಂಗಾಯಣಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನಿಲ್‌ ಕುಮಾರ್ ಭರವಸೆ ನೀಡಿದರು.

ಇಲ್ಲಿನ ರಂಗಾಯಣ ಆವರಣದಲ್ಲಿ ಬುಧವಾರ ಸಂಸ್ಥೆಯ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ರಂಗಾಯಣದ ಚಟುವಟಿಕೆಗಳು ನಡೆಯಲು ಅಗತ್ಯವಾದ ಎಲ್ಲ ಸಹಕಾರವನ್ನು ಇಲಾಖೆ ನೀಡಲಿದೆ. ಈ ಬಗ್ಗೆ ರಂಗಾಯಣ ನಿರ್ದೇಶಕರು ಮನವಿ ಸಲ್ಲಿಸಿದ್ದಾರೆ’ ಎಂದರು.

ಕಲ್ಯಾಣ ಕರ್ನಾಟಕ ಭಾಗವು ಅಂದಿನ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಬಂತು. ಹೀಗಾಗಿ, ಆಜಾದಿ ಕಾ ಅಮೃತ ಮಹೋತ್ಸವವನ್ನು ಸೆಪ್ಟೆಂಬರ್ 17ರಿಂದ ಒಂದು ವರ್ಷ ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡು ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದ್ದೇನೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ‘ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕದ ಹೋರಾಟದ ಇತಿಹಾಸವನ್ನು ರಾಜ್ಯದ ಜನರಿಗೆ ತಿಳಿಸುವ ಉದ್ದೇಶದಿಂದ ಮಲೆಗಳಲ್ಲಿ ಮದುಮಗಳು, ಪರ್ವ ಮಾದರಿಯನ್ನು ಬೃಹತ್ ನಾಟಕವನ್ನು ಕಲಾವಿದರು ತಯಾರಿಸುತ್ತಿದ್ದಾರೆ. ಇದನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರದರ್ಶಿಸುವ ಉದ್ದೇಶವಿದ್ದು, ಇಲಾಖೆಯಿಂದ ಅನುದಾನ ಕೊಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಬಸವರಾಜ ಮತ್ತಿಮೂಡ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ, ಪಾಲಿಕೆ ಮಾಜಿ ಸದಸ್ಯ ಪರಶುರಾಮ ನಸಲವಾಯಿ ಇದ್ದರು.

ಸಂಭಾವನೆ ಹೆಚ್ಚಿಸಲು ಕಲಾವಿದರ ಮನವಿ

ರಂಗಾಯಣದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಿಗೆ ಈಗ ನೀಡುತ್ತಿರುವ ಸಂಭಾವನೆಯಿಂದ ಜೀವನ ನಡೆಸುವುದು ಕಷ್ಟವಾಗಿದ್ದು, ಕೊರೊನಾದಿಂದಹೆಚ್ಚಾದ ಆರೋಗ್ಯ ವೆಚ್ಚವನ್ನು ಭರಿಸುವುದು ಆಗುತ್ತಿಲ್ಲ. ಹೀಗಾಗಿ, ಕಲಾವಿದರಿಗೆ ₹ 20 ಸಾವಿರ, ತಂತ್ರಜ್ಞರಿಗೆ ₹ 30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕಲಾವಿದರು ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಮೈಸೂರು ರಂಗಾಯಣವನ್ನು ಹೊರತುಪಡಿಸಿ ಕಲಾವಿದರಿಗೆ ಗರಿಷ್ಠ ₹ 16 ಸಾವಿರ ಸಂಭಾವನೆ ನೀಡಲಾಗುತ್ತದೆ. ಇದರಿಂದ ಯಾವುದೇ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಸಂಭಾವನೆ ಪರಿಷ್ಕರಣೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT