ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕರೆಯ ಸಹೋದರೆತೆಗೆ ರಕ್ಷಾ ಬಂಧನ

ಮಾರುಕಟ್ಟೆಯಲ್ಲಿ ಆಲಂಕಾರಿಕ ರಾಖಿಗಳು, ಉಡುಗೊರೆ ಮಳಿಗೆಗಳಲ್ಲಿ ಯುವತಿಯರ ದಂಡು
Last Updated 3 ಆಗಸ್ಟ್ 2020, 5:53 IST
ಅಕ್ಷರ ಗಾತ್ರ

ಕಲಬುರ್ಗಿ: ವರಮಹಾಲಕ್ಷ್ಮಿ ಹಬ್ಬದ ಸಗಡರ ಇನ್ನೂ ಇರುವಾಗಲೇ ಹೆಣ್ಣುಮಕ್ಕಳಿಗೆ ನೂಲುಹುಣ್ಣಿಮೆ ಸಂಭ್ರಮ ಬಂದಿದೆ. ಸಹೋದರ–ಸಹೋದರಿಯ ಬಾಂಧವ್ಯದ ಪ್ರತೀಕವಾಗಿ ಸೋಮವಾರ (ಆಗಸ್ಟ್ 3) ಆಚರಿಸುವ ರಕ್ಷಾ ಬಂಧನಕ್ಕೆ ಜಿಲ್ಲೆಯ ಎಲ್ಲೆಡೆ ವಾರದ ಹಿಂದಿನಿಂದಲೇ ತಯಾರಿ ನಡೆದಿದೆ.

ನಗರ ಸೇರಿದಂತೆ ಜಿಲ್ಲೆಯ ಎಲ್ಲ ಮಾರುಕಟ್ಟೆ, ಮಳಿಗೆಗಳಲ್ಲೂ ಈಗ ರಾಖಿಗಳದ್ದೇ ಮಾತು. ಇಲ್ಲಿನ ಸೂಪರ್‌ ಮಾರ್ಕೆಟ್‌, ಶಹಾಬಜಾರ್‌, ವಿವಿಧ ಮಾಲ್‌, ಬಡಾವಣೆಗಳಲ್ಲಿ ಇರುವ ಎಲ್ಲ ಕಿರಾಣಿ ಅಂಗಡಿಗಳ ಮುಂದೆಯೂ ರಾಖಿಗಳದ್ದೇ ಸಡಗರ.

ಪುಟ್ಟ ಮಕ್ಕಳೂ ಸೇರಿದಂತೆ ಯುವತಿಯರು, ಗೃಹಿಣಿಯರು ಕೂಡ ಭಾನುವಾರ ರಾಖಿ ಖರೀದಿಗೆ ಅಂಗಡಿಗಳಿಗೆ ಮುಗಿಬಿದ್ದರು. ಕೆಲವರು ವಾರದ ಹಿಂದೆಯೇ ರಾಖಿ ಖರೀದಿಸಿ, ದೂರದ ಊರಿನಲ್ಲಿರುವ ಅಣ್ಣ– ತಮ್ಮಂದಿರಿಗೆ ಪೋಸ್ಟ್‌ ಮಾಡಿದ್ದಾರೆ.

ವಿವಿಧ ವಿನ್ಯಾಸದ, ಹತ್ತಾರು ಬಗೆಯ ಆಕರ್ಷಕ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ₹ 10ರಿಂದ ಆರಂಭವಾಗಿ ₹ 2000ದವರೆಗೂ ಇವುಗಳ ದರವಿದೆ. ಹಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಹೋದರರಿಗೆ ಚಿನ್ನ ಅಥವಾ ಬೆಳ್ಳಿಯ ರಾಖಿ ಕಟ್ಟುವ ಸಂಭ್ರಮದಲ್ಲೂ ಇದ್ದಾರೆ.

ಮಾರುಕಟ್ಟೆಯಲ್ಲಿ ಇವೆ ಚಿತ್ತಾಕರ್ಷಕ ರಾಖಿಗಳು: ಯುವತಿಯರಿಗೆ

ಮೆಚ್ಚುಗೆ ಆಗುವಂಥ ಹಸುವಿನ ಚಿತ್ರ ಇರುವ, ಕೃಷ್ಣ–ದ್ರೌಪದಿ, ಮುತ್ತಿನ ಸರ, ವಜ್ರದ ಹರಳು ಬಳಸಿ ಮಾಡಿದ, ನಕ್ಷತ್ರ ಮಾದರಿ ಮುಂತಾದ ಚಿತ್ತಾಕರ್ಷಕ ರಾಖಿಗಳೂ ಲಭ್ಯ. ಹಿರಿಯರು, ಗೃಹಿಣಿಯರಿಗಾಗಿ ದೇವರ ಮೂರ್ತಿಗಳಿರುವ, ಉಲನ್‌ ದಾರಕ್ಕೆ ಮುತ್ತು ಪೋಣಿಸಿದ, ರುದ್ರಾಕ್ಷಿ ಪೋಣಿಸಿದ, ಬೆಳ್ಳಿ– ಬಂಗಾರ ವರ್ಣದ ಆಲಂಕಾರಿಕ ಬಂದಿವೆ. ಚಿಕ್ಕ ಮಕ್ಕಳನ್ನು ಸೆಳೆಯಲು ಮೈಟಿ ರಾಜು, ಛೋಟಾ ಭೀಮ್‌, ಟಾಮ್‌ ಅಂಡ್‌ ಜರ್‍ರಿ, ಡೋರೆಮೋನ್ ರಾಖಿಗಳು ಸಹ ಮಾರಾಟಕ್ಕೆ ಇವೆ.

ರಕ್ಷಾ ಬಂಧನ ಆಚರಣೆ ಹೇಗೆ ನಡೆದು ಬಂತು?

ದ್ವಾಪರಯುಗದಲ್ಲಿ ಶಿಶುಪಾಲನನ್ನು ಸಂಹಾರ ಮಾಡಿದ ಕೃಷ್ಣನ ಬೆರಳಿಗೆ ದ್ರೌಪದಿಯು ನೂಲೆಳೆ ಕಟ್ಟುವ ಮೂಲಕ ಈ ಹಬ್ಬ ಆಚರಣೆಗೆ ಬಂದಿದೆ ಎನ್ನುವುದು ಹಿರಿಯರ ಮಾತು. ಅಲ್ಲಿಂದ ಇತಿಹಾಸದುದ್ದಕ್ಕೂ ರಕ್ಷಣೆ ಕೋರಿ ತಂಗಿಯರು ಅಣ್ಣಂದಿರಿಗೆ ರಾಖಿ ಕಟ್ಟುತ್ತ ಬಂದಿದ್ದಾರೆ.

ಇವರೇನಂತಾರೆ?

ನಾನು ಮತ್ತು ನನ್ನ ತಮ್ಮ ಪ್ರತಿ ದಿನ ಒಂದಲ್ಲ ಒಂದು ತಂಟೆ ತೆಗೆದು ಒಬ್ಬರನ್ನೊಬ್ಬರು ಕಾಲೆಳೆಯುತ್ತೇವೆ. ಅಣ್ಣ–ತಮ್ಮಂದಿರನ್ನು ಗೋಳಾಡಿಸುವುದರಲ್ಲೇ ಗಾಢವಾದ ಆ‍ಪ್ತಭಾವ ಅಡಗಿದೆ. ರಕ್ಷಾ ಬಂಧನ ಬಂದಾಗೆಲ್ಲ ತಮ್ಮನ ಬಗ್ಗೆ ಭಾವುಕಳಾಗುತ್ತೇನೆ. ವರ್ಷದ ಜಗಳವೆಲ್ಲ ಅಂದು ‘ಮಾಫಿ‌’ ಆಗುತ್ತದೆ. ಇಷ್ಟೊಂದು ಸುಮಧುರ ಬಾಂಧವ್ಯ, ಅಟ್ಯಾಚ್‌ಮೆಂಟ್‌ ಸಹೋದರರಿಂದ ಮಾತ್ರ ಸಿಗಲು ಸಾಧ್ಯ ಎನ್ನುತ್ತಾರೆ ವೈದ್ಯೆಡಾ.ಶ್ವೇತಾ ಸಾವಳಗಿ.

ಈ ಬಾರಿ ಕೋವಿಡ್‌ ಕಾರಣ ಅಣ್ಣನಿಗೆ ಖುದ್ದು ರಾಖಿ ಕಟ್ಟಲು ಆಗುತ್ತಿಲ್ಲ. ಆದರೆ, ಪೋಸ್ಟ್‌ ಮಾಡಿದ್ದೇನೆ. ಈ ಹಿಂದಿನ ವರ್ಷದ ಸಂಭ್ರಮ ನೆನೆದರೆ ಬೇಸರಾಗುತ್ತದೆ. ಅಣ್ಣನ ಜೊತೆಗಿನ ಪ್ರೀತಿ, ತುಂಟತನಗಳೇ ನಮ್ಮ ಬಾಂಧವ್ಯದ ಬೆಸುಗೆ ಗಟ್ಟಿಗೊಳಿಸುತ್ತವೆ. ಗಂಡುಮಕ್ಕಳು ಹೊರಗಡೆ ಹೆಚ್ಚು ಓಡಾಡುತ್ತಾರೆ. ಹಾಗಾಗಿ, ಅಣ್ಣನಿಗೆ ಕೋವಿಡ್‌ನಿಂದ ರಕ್ಷಣೆ ಸಿಗಲಿ ಎಂದೇ ಹರಸುತ್ತೇನೆ ಎಂದು ವಿದ್ಯಾರ್ಥಿನಿಶ್ವೇತಾ ಎಸ್‌. ಮೋಟಗಿ.

ಮದುವೆಯಾಗಿ ಬಂದ ಮೇಲೂ ಅಣ್ಣನಿಗೆ ರಾಖಿ ಕಟ್ಟುವುದನ್ನು ನಿಲ್ಲಿಸಿಲ್ಲ. ಸಹೋದರರಿಗೆ ರಾಖಿ ಕಟ್ಟುವುದೆಂದರೆ ನಮಗೆ ಅವರು ರಕ್ಷಣೆ ನೀಡಲಿ ಎಂದಷ್ಟೇ ಭಾವಿಸಿದ್ದಾರೆ. ಆದರೆ, ತವರಿನ ರಕ್ಷಣೆಗೆ ಹೆಣ್ಣುಮಕ್ಕಳೇ ಕಟ್ಟುವ ಬಂಧವಿದು ಎನ್ನುವುದು ಗೃಹಿಣಿವಿಜಯಲಕ್ಷ್ಮಿ ಪಾಟೀಲ ಅವರ ಅಭಿಪ್ರಾಯ.

ಪ್ರತಿ ವರ್ಷ ಅಕ್ಕ ರಾಖಿ ಕಟ್ಟುತ್ತಾರೆ. ನನಗೆ ಇಷ್ಟವಾಗುವ ಒಂದು ಕಾಣಿಕೆ ಕೊಡುತ್ತೇನೆ. ಏನೇ ಕೊಟ್ಟರೂ ಪ್ರಿತಿ, ಕಾಳಜಿಗಿಂತ ದೊಡ್ಡ ಉಡುಗೊರೆ ಹೆಣ್ಣುಮಕ್ಕಳಿಗೆ ಇನ್ನೇನೂ ಇರುವುದಿಲ್ಲ. ಈಗಂತೂ ಪರಸ್ಪರ ಸಹೋದರ– ಸಹೋದರಿಯರು ಒಬ್ಬರನ್ನೊಬ್ಬರು ರಕ್ಷಿಸಬಲ್ಲರು ಎನ್ನುವುದುವ್ಯಾಪಾರಿಅಮೇಯ ಆನಂದ ಅವರ ಅನಿಸಿಕೆ.

ಒಡಹುಟ್ಟಿದವರು ಹಣೆಗೆ ತಿಲಕವಿಟ್ಟು, ನೂಲೆಳೆಯ ರಾಖಿ ಕಟ್ಟಿ, ಸಿಹಿ ತಿನಿಸಿ, ಆರತಿ ಮಾಡಿದಾಗ ಏನೋ ಸಂಭ್ರಮ ಮೂಡುತ್ತದೆ. ನಾವು ಅವರಿಗೆ ರಕ್ಷಣೆ ಕೊಡುತ್ತೇವೆ ಎನ್ನುವುದಕ್ಕಿಂತ ಹೆಣ್ಣುಮಕ್ಕಳ ಆಶೀರ್ವಾದವೇ ನಮ್ಮನ್ನು ಕಾಯುತ್ತದೆ ಎಂಬುದು ಅರಿವಾಗಬೇಕುಸಾಫ್ಟ್‌ವೇರ್‌ ಎಂಜಿನಿಯರ್‌ಕೇದಾರ ದಂಡೆ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT