ಶುಕ್ರವಾರ, ಜುಲೈ 30, 2021
28 °C

ಕಲಬುರ್ಗಿ | ಸೇಡಂ ರಸ್ತೆಯಲ್ಲಿ ಗೂಡಂಗಡಿ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಸೇಡಂ ರಸ್ತೆ ಪಕ್ಕದ ಫುಟ್‌ಪಾತ್‌ನಲ್ಲಿ ಹಲವಾರು ಗೂಡಂಗಡಿ ಹಾಗೂ ಡಬ್ಬಗಳನ್ನು ಹಾಗೆ ಬಿಡಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚರಣೆ ಆಗುತ್ತಿದ್ದು, ಕೂಡಲೇ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ವಿದ್ಯಾನಗರದ ಮಲ್ಲಿಕಾರ್ಜುನ ತರುಣ ಸಂಘದಿಂದ ಸೋಮವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಕೊರೊನಾ ನಿಯಂತ್ರಣಕ್ಕಾಗಿ ನಗರವನ್ನು ಲಾಕ್‌ಡೌನ್‌ ಮಾಡಿದಾಗಿನಿಂದ ನೂರಾರು ವ್ಯಾಪಾರಿಗಳು ತಮ್ಮ ಗೂಡಂಗಡಿಗಳನ್ನು ಬಂದ್‌ ಮಾಡಿ ರಸ್ತೆ ಪಕ್ಕದಲ್ಲಿ ಬಿಟ್ಟುಹೋದರು. ಈಗ ಲಾಕ್‌ಡೌನ್‌ ಮುಗಿದ ಮೇಲೂ ಇವುಗಳು ಅಲ್ಲೇ ಇವೆ. ಅದರಲ್ಲೂ ವಿದ್ಯಾನಗರದ ಬಸವೇಶ್ವರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಹಲವು ಅಂಗಡಿಗಳು ಫುಟ್‌ಪಾತ್‌ ಮೇಲೆ ಇವೆ. ಇದರಿಂದ ಆಸ್ಪತ್ರೆ, ಬಸ್‌ ನಿಲ್ದಾಣಗಳಿಗೆ ಬರುವವರಿಗೆ ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸ್ವಚ್ಛತೆ ಕಾಪಾಡಲು ಆಗ್ರಹ: ಗೂಡಂಗಡಿಗಳ ತೊಂದರೆ ಒಂದೆಡೆಯಾದರೆ, ಇವುಗಳ ಹಿಂದೆ– ಅಕ್ಕಪಕ್ಕದಲ್ಲಿ ಸಾಕಷ್ಟು ಕೊಳಚೆ ನಿರ್ಮಾಣವಾಗಿದ್ದು ಇನ್ನೊಂದು ಸಂಕಷ್ಟ. ಇದರಿಂದ ಹಂದಿ– ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಅಲ್ಲಲ್ಲಿ ಕೊಚ್ಚೆ ಕಟ್ಟಿಕೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಈಚೆಗೆ ವಿದ್ಯಾನಗರ ಬಡಾವಣೆ ಉದ್ಯಾನವೊಂದರಲ್ಲಿ ಕಾಡುಹಂದಿ ಕೂಡ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಹಂದಿ ಉಪಟಳ ನಿಯಂತ್ರಿಸುವಂತೆ ಎರಡು ಬಾರಿ ಪಾಲಿಕೆಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹಂದಿ ಹಿಡಿಯಲು ಬೆಳಗಾವಿಯಿಂದ ತಂಡ ಕರೆಸಬೇಕಾಗುತ್ತದೆ. ಲಾಕ್‌ಡೌನ್‌ ಕಾರಣ ಇನ್ನಷ್ಟು ದಿನ ಸಾಧ್ಯವಿಲ್ಲ ಎಂದು ಉತ್ತರಿಸಿದ್ದರು. ಈಗ ಲಾಕ್‌ಡೌನ್‌ ಮುಗಿದಿದ್ದು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದೂ ಕೋರಿದ್ದಾರೆ.

ಮಲ್ಲಿಕಾರ್ಜುನ ತರುಣ ಸಂಘದ ಉಪಾಧ್ಯಕ್ಷ ವೀರೇಶ ನಾಗಶಟ್ಟಿ, ಕಾರ್ಯದರ್ಶಿ ಕರಣ ಆಂದೊಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.