ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಅಡಿಯಲ್ಲಿ 250 ದಿನ ಕೆಲಸ ನೀಡಲು ಆಗ್ರಹ

Last Updated 22 ಜೂನ್ 2020, 10:14 IST
ಅಕ್ಷರ ಗಾತ್ರ

ಕಲಬುರ್ಗಿ: ದೀರ್ಘಾವಧಿ ಲಾಕ್‌ಡೌನ್ ಪರಿಣಾಮ ಗ್ರಾಮೀಣರ ಬದುಕು ನಲುಗಿಹೋಗಿದೆ. ಕಾರಣ ಉದ್ಯೋಗ ಖಾತ್ರಿಯ ಕೆಲಸದ ದಿನಗಳನ್ನು 100ರಿಂದ 250ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಲದ ಅಧ್ಯಕ್ಷ ಡಾ.ಅಬ್ದುಲ್ ರಜಾಕ್ ನಧಾಪ ಆಗ್ರಹಿಸಿದರು.

ಕೆಲಸದ ದಿನ ಹೆಚ್ಚಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಹಳ್ಳಿಗಳ ಪರಿಸ್ಥಿತಿ ಅವರಿಗೆ ಮನವರಿಕೆ ಆಗಿದ್ದು, ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಳ್ಳಿ ಜನ ನಗರ ತೊರೆದು ಮರಳಿದ್ದಾರೆ. ಇದರಿಂದ ಸ್ಥಳೀಯರಿಗೂ ಈನಿಷ್ಠ ಉದ್ಯೋಗ ಸಿಗುತ್ತಿಲ್ಲ. ದಿನಗೂಲಿ, ಕೃಷಿ ಕಾರ್ಮಿಕರ ಜೀವನ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿವೆ. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲದಿದ್ದರೆ ಮಹಾ ಮಂಡಳದಿಂದ ನಿರಂತರ ಹೋರಾಟ ಮಾಡುತ್ತೇವೆ ಎಂದರು.

ಸದ್ಯಕ್ಕೆ 100 ದಿನ ಕೆಲಸ ಕೊಡುವುದಾಗಿ ಹೇಳಿ ಎಷ್ಟೋ ಕಾಮಗಾರಿಗಳನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ. ಮಳೆಯಾದ ಕಾರಣ 15 ದಿನದಲ್ಲೇ ಕೆಲಸ ಬಿಡಿಸಿದ್ದಾರೆ. ಇದನ್ನು ಮುಂದುವರಿಸುವ ಜತೆಗೆ, ದಿನಗೂಲಿ ದರವನ್ನೂ ಹೆಚ್ಚಿಸಬೇಕು, ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಬೇಕು ಎಂದರು.

ಬರಪೀಡಿತ ಎಂದು ಪರಿಗಣಿಸಿದ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ 150 ದಿನಗಳವರೆಗೆ ಕೆಲಸ ನೀಡಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ನರೇಗಾ ಯೋಜನೆಯನ್ನು ರಾಜ್ಯದಲ್ಲಿ ಕೇವಲ 22 ಜಿಲ್ಲೆಗಳಲ್ಲಿ 103 ತಾಲ್ಲೂಕುಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ನಿಬಂಧನೆ ಸಡಿಲಿಸಿ ಎಲ್ಲ ಜಿಲ್ಲೆಗಳಿಗೂ 250 ದಿನಗಳವರೆಗೆ ಕೆಲಸ ನೀಡಲು ಮರು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ನರೇಗಾ ಫಲಾನುಭವಿಗಳಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ನೀಡಬೇಕು. ಕೃಷಿ ಹೊಂಡ, ಬದು ನರ್ಮಾಣ, ಹೂಳು ತೆಗೆಯುವುದು, ಬಾವಿ ತೆರೆಯುವುದು, ಸಸಿ ನೆಡುವುದು ಸೇರಿದಂತೆ ಪರಿಸರಕ್ಕೆ ಅನುಕೂಲವಾಗುವಂತಹ ಕೆಲಸ ಇರುವುದರಿಂದ ಇಂತಹ ಕುಟುಂಬಗಳಿಗೆ ಸ್ವಂತ ಹಣದಲ್ಲಿ ವಿಮಾ ಹಣವನ್ನು ಭರಿಸಿ, ಜೀವರಕ್ಷಣೆ ವಿಮೆ ಮಾಡಿಸಬೇಕು ಎಂದರು.

ಮೌಲಾಲಿ ನದಾಫ, ಇಸ್ಮಾಯಿಲ್ ನದಾಫ, ಸದ್ದಾಂ ಹುಸೇನ್ ನದಾಫ, ವಾಹೀದ್ ಅಲಿ ನದಾಫ್, ರಫೀಕ್ ಅರಳಗುಂಡಗಿ, ದಸ್ತಗೀರ ನದಾಫಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT