ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ: ಪ್ರಾಣ ಹಾನಿ ತಡೆಯಲು ಕ್ರಮಕೈಗೊಳ್ಳಿ

ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಇಲಾಖೆ ವಿಭಾಗಮಟ್ಟದ ಪ್ರಗತಿ ಪರಿಶೀಲನೆ
Published 25 ಜೂನ್ 2024, 6:40 IST
Last Updated 25 ಜೂನ್ 2024, 6:40 IST
ಅಕ್ಷರ ಗಾತ್ರ

ಕಲಬುರಗಿ: ಈ ಬಾರಿ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯೇ ವಾಡಿಕೆಗಿಂತ ಜಾಸ್ತಿಯಾಗಿದ್ದು, ಮುಂಗಾರಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಮಾನವ, ಜಾನುವಾರು ಪ್ರಾಣ ಹಾನಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಭಾಗ ಮಟ್ಟದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರವಾಹದ ಹಾನಿಗೆ ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಅಷ್ಟಕ್ಕೇ ನಮ್ಮ ಕೆಲಸ ಸೀಮಿತವಾಗಬಾರದು. ಬದಲಾಗಿ ಪ್ರವಾಹ ಮುನ್ನ ಜನರ ರಕ್ಷಣೆ ಮಾಡಿ ಪ್ರಾಣಿ, ಮಾನವ ಹಾನಿಯಾಗದಂತೆ ತಡೆಯುವುದು ಸರ್ಕಾರದ ಉದ್ದೇಶ. ಪ್ರವಾಹ ಬಂದ‌ ನಂತರ ತಯಾರಿ ಮಾಡುವುದು ಬೇಡ. ಮಳೆ‌ ಮುನ್ಸೂಚನೆ ಮಾಹಿತಿ ನೀಡುವ ತಂತ್ರಜ್ಞಾನ ಬಹಳಷ್ಟು ಸುಧಾರಣೆಯಾಗಿದೆ.‌ ಇದರ ಆಧಾರದ ಮೇಲೆ ಪ್ರವಾಹ ಭೀತಿ ಇರುವ ನದಿ, ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಕಾಳಜಿ ಕೇಂದ್ರದಲ್ಲಿ ಜನರಿಗೆ ಸೂಕ್ತ ಉಪಚಾರ ಮಾಡಬೇಕು’ ಎಂದರು.

ಭೀಮಾ ನದಿಯ ಪ್ರವಾಹ ಭೀತಿ ಕಲಬುರಗಿ, ವಿಜಯಪುರ ಜಿಲ್ಲೆಗೆ ಹೆಚ್ಚು. ಮಹಾರಾಷ್ಟ್ರ ಸರ್ಕಾರದೊಂದಿಗೆ ಕಲಬುರಗಿ ಜಿಲ್ಲಾಡಳಿತ ಸತತ ಸಂಪರ್ಕದಲ್ಲಿರಬೇಕು. ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ಪ್ರವಾಹ ಭೀತಿ ಗ್ರಾಮಗಳಿಗೆ ಈಗಲೇ ಭೇಟಿ ನೀಡಿ ಪ್ರವಾಹ ಬಂದಲ್ಲಿ ಆಗಬಹುದಾದ ಸಮಸ್ಯೆಗಳನ್ನು ಅಂದಾಜಿಸಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗದ ಜಿಲ್ಲಾಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕೈಗೊಳ್ಳುವ ತಾತ್ಕಾಲಿಕ ಪರಿಹಾರ ರೂಪದ ರಸ್ತೆ, ಅಂಗನವಾಡಿ, ಶಾಲೆ‌ ಕಟ್ಟಡ ದುರಸ್ತಿ, ರಸ್ತೆ ಸಂಪರ್ಕ ಜೋಡಣೆ ಇವೆಲ್ಲ ಕಾಮಗಾರಿಗಳು ತಿಂಗಳೊಳಗೆ ಮುಗಿಸಬೇಕು. ಇದನ್ನು ವರ್ಷಗಟ್ಟಲೇ ಎಳೆದಾಡಿದರೆ ಅದಕ್ಕೆ ಅರ್ಥವಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವರು ಖಡಕ್ ಸೂಚನೆ ನೀಡಿದರು.

ಮಳೆಗಾಲ ಹಿನ್ನೆಲೆಯಲ್ಲಿ ಕಲುಷಿತ ನೀರು ಪೂರೈಕೆ ಸಾಮಾನ್ಯ. ಆದರೆ ಇದನ್ನು‌ ಮೆಟ್ಟಿ ನಿಂತು ಪ್ರತಿ ಹಳ್ಳಿ, ಪಟ್ಟಣದ ಸಾರ್ವಜನಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವುದು ನಮ್ಮ‌ ಜವಾಬ್ದಾರಿ ಎಂದರು.

ಪ್ರಸಕ್ತ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಮಳೆ ವಾಡಿಕೆಗಿಂತ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಗಳು ಆಶದಾಯಕವಾಗಿವೆ. ಈ ವರ್ಷ ರಾಜ್ಯದಾದ್ಯಂತ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಹಂತದಲ್ಲಿರುವ ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿ ತೀವ್ರಗೊಳಿಸಬೇಕು‌. ಆರು ತಿಂಗಳಿಗಿಂತ ಹೆಚ್ಚಿನ ಅವಧಿಯ ಪ್ರಕರಣಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ವಿಚಾರಣೆಗೆ ವಕೀಲರು ಬಂದಿಲ್ಲ ಅಂತ ಪ್ರಕರಣ‌ ಮುಂದೂಡಿದರೆ‌ ಜನರಿಗೆ ನ್ಯಾಯ ಕೊಡಿಸೋದು ಯಾವಾಗ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ತಾಂಡಾಗಳನ್ನು ಕಂದಾಯ ಗ್ರಾಮ ಘೋಷಿಸಿ ಹಕ್ಕು ಪತ್ರ ವಿತರಣೆಗೆ ಗಣಕೀಕರಣ ಕಾರ್ಯಕ್ಕೆ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಮುಗಿಸಬೇಕು ಎಂದು ಸೂಚಿಸಿದರು.

ಬಳ್ಳಾರಿಯಲ್ಲಿ 19, ಕೊಪ್ಪಳದಲ್ಲಿ 27 ಹಾಗೂ ವಿಜಯನಗರ ಜಿಲ್ಲೆಯಲ್ಲಿ 22 ಸಮಸ್ಯಾತ್ಮಕ ಹಳ್ಳಿಗಳಿವೆ ಎಂದು ಕ್ರಮವಾಗಿ ಪ್ರಶಾಂತಕುಮಾರ ಮಿಶ್ರಾ, ನಲಿನ್ ಅತುಲ್ ಹಾಗೂ ಎಂ.ಎಸ್.ದಿವಾಕರ ತಿಳಿಸಿದರು.‌ 

ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣೆ ವಿಭಾಗದ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಎಸ್ಎಸ್‌ವೈ ನಿರ್ದೇಶಕ ರಂಗಪ್ಪಾ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೊರೇಷನ್ ಎಂ.ಡಿ.ವಸಂತಕುಮಾರ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗಳು ಹಾಗೂ ಭೂಮಾಪನ ಮುದ್ರಾಂಕ ಇಲಾಖೆ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗಳು ಹಾಗೂ ಭೂಮಾಪನ ಮುದ್ರಾಂಕ ಇಲಾಖೆ ಅಧಿಕಾರಿಗಳು

2025ರ ಅಂತ್ಯಕ್ಕೆ ಇಲಾಖೆ ಡಿಜಿಟಲೀಕರಣ

ಕಂದಾಯ ಇಲಾಖೆಯು ಎಲ್ಲಾ ಆಯಾಮದಿಂದ ಡಿಜಿಟಲೀಕರಣಕ್ಕೆ ಮುಂದಾಗಿದೆ. ಈಗಾಗಲೇ ಇ–ಆಫೀಸ್ ಅನುಷ್ಠಾನದಲ್ಲಿ ಶೇ 80ರಷ್ಟು ಪ್ರಗತಿ ಸಾಧಿಸಿದೆ. ಭೂಸುರಕ್ಷಾ ಯೋಜನೆಯಡಿ ರಾಜ್ಯದ 31 ತಾಲ್ಲೂಕು ಕಚೇರಿಯಲ್ಲಿ ಪ್ರಾಯೋಗಿಕವಾಗಿ ರೆಕಾರ್ಡ್ ರೂಂ ದಾಖಲೀಕರಣ ಕಾರ್ಯ ಪ್ರಾರಂಭಿಸಿದ್ದು ಇದುವರೆಗೆ 3 ಕೋಟಿ ದಾಖಲೆ ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ‘ಮುಂದಿನ ಒಂದು ತಿಂಗಳಿನಲ್ಲಿ ರಾಜ್ಯದ ಉಳಿದ ತಾಲ್ಲೂಕುಗಳಲ್ಲೂ ಇದಕ್ಕೆ ಚಾಲನೆ ನೀಡಲಾಗುವುದು. ಗ್ರಾಮ ಲೆಕ್ಕಾಧಿಕಾರಿ ಕಂದಾಯ ನಿರೀಕ್ಷಕರಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದ್ದು ಅವರು ಹಳ್ಳಿಯಲ್ಲಿಯೇ ಕುಳಿತು ಕೆಲಸ ಮಾಡಬಹುದು. ಕಂದಾಯ ಕೋರ್ಟ್ ಪ್ರಕರಣಗಳ ಸ್ಥಿತಿಗತಿ ಅರಿಯಲು ಆರ್‌ಸಿ ಸಿಎಂಎಸ್ (ರೆವೆನ್ಯೂ ಕೋರ್ಟ್ ಕೇಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ತಂತ್ರಾಂಶ ಅಭಿವೃದ್ಧಿಪಡಿಸಿದೆ. ಒಟ್ಟಾರೆ 2025ರ ಅಂತ್ಯಕ್ಕೆ ಕಂದಾಯ ಇಲಾಖೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದು’ ಎಂದರು.

ಸಾವಿರ ವಿಎ, 750 ಸರ್ವೇಯರ್ ಭರ್ತಿ

ರಾಜ್ಯದಲ್ಲಿ 1 ಸಾವಿರ ಗ್ರಾಮ ಆಡಳಿತಾಧಿಕಾರಿಗಳು (ವಿಎ) 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕ್ರಿಯೆ ನಡೆದಿದೆ. ಇದರ ಜೊತೆಗೆ 34 ಎಡಿಎಲ್‌ಆರ್ ನೇಮಕಾತಿ ಸಹ ನಡೆದಿದೆ. ಇದರಿಂದ ಸರ್ವೇ ಇಲಾಖೆಗೆ ಬಲ ಬರಲಿದೆ. ಇದನ್ನು‌ ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಮಲ್ಟಿ ಹೋಲ್ಡರ್ ಆರ್‌ಟಿಸಿಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ನೀಲನಕ್ಷೆ ಸಿದ್ಧಗೊಳಿಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT