ಭಾನುವಾರ, ನವೆಂಬರ್ 29, 2020
24 °C

ಬಸವ ಮೂರ್ತಿ ಭಗ್ನ: ಸತ್ಯ ಬಹಿರಂಗಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬೆಳಗಾವಿ ಜಿಲ್ಲೆಯ ಬಿಜಗುಪ್ಪಿಯಲ್ಲಿ ಬಸವೇಶ್ವರರ ಪ್ರತಿಮೆ ಭಗ್ನ ಮಾಡಿರುವುದ ಅಕ್ಷಮ್ಯ ಅಪರಾಧ. ಆದರೆ, ಪೊಲೀಸರು ಸರಿಯಾದ ತನಿಖೆ ನಡೆಸದೇ ಪರೋಕ್ಷವಾಗಿ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶಟಗಾರ ದೂರಿದರು.

‘ಬಸವಣ್ಣನವರ ಕಲ್ಲಿನ ಮೂರ್ತಿಯನ್ನು ಉದ್ದೇಶಪೂರ್ವಕವಾಗಿ ಭಗ್ನಗೊಳಿಸಲಾಗಿದೆ. ಸತ್ಯಾಸತ್ಯತೆ ಬಯಲಿಗೆಳೆಯದೆ ಬಸವಾನುಯಾಯಿಗಳ ಕಣ್ಣಿಗೆ ಮಣ್ಣೆರೆಚುವ ಕಾರ್ಯ ನಡೆದಿದೆ. ಆದರೆ, ಪೊಲೀಸರು ಕಾಟಾಚಾರದ ತನಿಖೆ ನಡೆಸಿದ್ದು, ಇದು ಆಕಸ್ಮಿಕ ಘಟನೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು ತನಿಖೆ. ಕೂಡಲೇ ಉನ್ನತ ಮಟ್ಟದ ತನಿಖೆ ಮಾಡಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಅವರು ‍ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.‌

‘ಜಗತ್ತಿಗೆ ಮಾನವತೆ, ಸಮಾನತರ ಸಂದೇಶ ನೀಡಿದ ಬಸವೇಶ್ವರರ ಪ್ರತಿಮೆ ಭಗ್ನ ಮಾಡಿರುವುದು ವಿಕೃತಿ. ಇಂಥ ಕೃತ್ಯಗಳಿಗೆ ಬೆಳಗಾವಿ ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಕೂಡಲೇ ಜಿಲ್ಲಾಡಳಿತವು ಗಮನಹರಿಸಿ ಕ್ರಮಕೈಗೊಳ್ಳಬೇಕು. ತಕ್ಷಣ ನೂತನ ಮೂರ್ತಿ ಪ್ರತಿಷ್ಠಾಪಿಸುವ ಜವಾಬ್ದಾರಿ ವಹಿಸಬೇಕು’ ಎಂದರು.

‘ಕಲಬುರ್ಗಿ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ. ಬಸವಾದಿ ಶರಣರ ಸಂದೇಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಕೊಳ್ಳಲು ಪ್ರೇರಣೆ ನೀಡುವ ಉದ್ದೇಶದಿಂದ ಸುಲೇಪೇಟ, ರಟಕಲ್, ಡೋಂಗರಗಾಂವ ಗ್ರಾಮಗಳಲ್ಲಿ ಬಸವಣ್ಣನವರ ಮೂರ್ತಿ ಲೋಕಾರ್ಪಣೆ ಮಾಡಲು ಈಗಾಗಲೇ ಸಿದ್ಧತೆಗಳು ನಡೆದಿವೆ. ಲಾಕ್‌ಡೌನ್‌ ಕಾರಣ ಈ ಕೆಲಸ ತುಸು ವಿಳಂಬವಾಗಿದೆ. ಆದಷ್ಟು ಬೇಗ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ವಿಶ್ವಗುರುವಿನ ಪ್ರತಿಮೆ ಇರಲಿದೆ’ ಎಂದರು ಅವರು ಹೇಳಿದರು.

ಮುಖಂಡರಾದ ಬಸವರಾಜ ಮೊರಬದ, ರಮೇಶ ದುತ್ತರಗಿ, ಅಯ್ಯಣಗೌಡ ಪಾಟೀಲ, ಮಹಾದೇವ ಬಡಾ, ರೇವಣಸಿದ್ದ ಬಡಾ, ವಿಶ್ವನಾಥ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು