ಬುಧವಾರ, ಏಪ್ರಿಲ್ 21, 2021
32 °C
ಕೇಂದ್ರಕ್ಕೆ ನಾಳೆ ಚಾಲನೆ ನೀಡಲಿರುವ ಸಚಿವ ಡಾ. ಸುಧಾಕರ್

ಕಲಬುರ್ಗಿಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿ.ವಿ. ಪ್ರಾದೇಶಿಕ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಪ್ರಾದೇಶಿಕ ಕೇಂದ್ರ ಆರಂಭಿಸುವ ದಶಕಗಳ ಕನಸು ನನಸಾಗುತ್ತಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಇದೇ 21ರಂದು ನಗರದ ಹೊರವಲಯದ ಕುಸನೂರು ಬಳಿ ನೂತನ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ.

‘ವಿ.ವಿ.ಯೊಂದಿಗೆ ಸಂಯೋಜನೆ ಹೊಂದಿರುವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರಾದೇಶಿಕ ಕೇಂದ್ರಗಳು ನಿಷ್ಕ್ರಿಯವಾಗಿದ್ದರಿಂದ ಹೊಸದಾಗಿ ಕೇಂದ್ರ ಆರಂಭಿಸಬೇಕು’ ಎನ್ನುವ ಪ್ರಸ್ತಾವವನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಡಾ. ಎಚ್‌. ವೀರಭದ್ರಪ್ಪ ಅವರು 2000ನೇ ಇಸ್ವಿಯಲ್ಲಿ ಇರಿಸಿದ್ದರು. ಆದರೆ, ಆ ಪ್ರಸ್ತಾವ ಅಷ್ಟಕ್ಕೇ ನಿಂತಿತ್ತು. 10 ವರ್ಷಗಳ ಬಳಿಕ ವಿ.ವಿ. ಕುಲಪತಿ ಡಾ. ಶ್ರೀಪ್ರಕಾಶ್ ಅವರು ಈ ಪ್ರಸ್ತಾವವನ್ನು ಒಪ್ಪಿಕೊಂಡರು. ಅದಕ್ಕೆ ಪೂರಕವಾಗಿ ಸಿನೆಟ್ ಸದಸ್ಯರಾಗಿದ್ದ ಡಾ. ಗಿರೀಶ ಗಲಗಲಿ ಅವರು ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ನಿವೇಶನ ಒದಗಿಸಿದ್ದರು.

2014ರ ಆಗಸ್ಟ್‌ನಲ್ಲಿ ಅಂದಿನ ಕುಲಪತಿ ಡಾ. ರವೀಂದ್ರನಾಥ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾದರಿಯಲ್ಲಿ ಪ್ರಾದೇಶಿಕ ಕೇಂದ್ರಗಳಿಗೆ ನೀಡಬಹುದಾದ ಅಧಿಕಾರ ಹಾಗೂ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲು ಸಮಿತಿ ನೇಮಕ ಮಾಡಿದ್ದರು.

ಈ ಕುರಿತು ’ಪ್ರಜಾವಾಣಿ‘ಗೆ ಪ್ರತಿಕ್ರಿಯೆ ನೀಡಿದ ಸಿನೆಟ್ ಸದಸ್ಯ ಡಾ. ಶರದ್ ಎಂ. ತಂಗಾ, ‘ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯಲ್ಲಿ ರವೀಂದ್ರ ಬಣಕಾರ, ಕಿರಣ್ ಕುಮಾರ್, ಗಿರೀಶ ಗಲಗಲಿ ಹಾಗೂ ಪ್ರಾಣೇಶ ಗುಡೂರ ಇದ್ದರು. ಸಮಿತಿ ಸಲ್ಲಿಸಿದ ಶಿಫಾರಸುಗಳನ್ನು ಅದೇ ವರ್ಷದ ಅಕ್ಟೋಬರ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಕೊಂಡಿತು. ನಂತರ ಪ್ರಾದೇಶಿಕ ಕೇಂದ್ರ ಆರಂಭಿಸುವ ಅಧಿಸೂಚನೆಯೂ ಹೊರಬಿತ್ತು’ ಎಂದರು.

ಕಲಬುರ್ಗಿ, ಬೆಳಗಾವಿ, ಮಂಗಳೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸಲು ಒಪ್ಪಿಗೆ ನೀಡಿದ್ದು, ಮೊದಲ ಪ್ರಾದೇಶಿಕ ಕೇಂದ್ರ ಕಲಬುರ್ಗಿಯಲ್ಲಿ ಸ್ವಂತ ಕ್ಯಾಂಪಸ್ ಹೊಂದಲಿದೆ. ದಾವಣಗೆರೆಯಲ್ಲಿ ಈಗಷ್ಟೇ ನಿವೇಶನ ಮಂಜೂರಾಗಿದ್ದು, ಉಳಿದ ನಗರಗಳಲ್ಲಿ ಇನ್ನಷ್ಟೇ ಜಾಗ ಸಿಗಬೇಕಿದೆ ಎಂದು ಅವರು
ವಿವರಿಸಿದರು.

ಕಲಬುರ್ಗಿಯಲ್ಲಿ ಪ್ರಾದೇಶಿಕ ಕೇಂದ್ರ ಆರಂಭವಾಗುವುದರಿಂದ ಈ ಭಾಗದ ವೈದ್ಯಕೀಯ ಕಾಲೇಜುಗಳ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿ.ವಿ. ಸಂಬಂಧಿ ಕೆಲಸಗಳಿಗಾಗಿ ಬೆಂಗಳೂರಿಗೆ  ಹೋಗುವುದು ತಪ್ಪಲಿದೆ.  ಈ ಕೇಂದ್ರದ ನಿರ್ವಹಣೆಯನ್ನು ವಿ.ವಿ.ಯ ಸಹಾಯಕ ರಿಜಿಸ್ಟ್ರಾರ್ ಅವರು ವಹಿಸಿಕೊಳ್ಳಲಿದ್ದಾರೆ. ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಹಲವು ಆಯುರ್ವೇದ, ನರ್ಸಿಂಗ್ ಕಾಲೇಜುಗಳಲ್ಲಿ ಉತ್ತಮ ಸಭಾಂಗಣಗಳಿಲ್ಲ. ಅಂತಹ ಕಾಲೇಜು ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲಿ ತಮ್ಮ ಉಪನ್ಯಾಸ, ಕಾರ್ಯಾಗಾರ ಏರ್ಪಡಿಸಬಹುದಾಗಿದೆ ಎಂದು ಶರದ್ ತಂಗಾ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು