ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ಪೂರ್ಣ: ಪ್ರಯಾಣಿಕರಿಗೆ ಅನುಕೂಲ

ಚಿತ್ತಾಪುರ-ಮಳಖೇಡ, ಸೇಡಂ, ಕಾಳಗಿ–ಕಲಬುರಗಿ ಮುಖ್ಯ ರಸ್ತೆ: ₹ 9.50 ಕೋಟಿ ವೆಚ್ಚದಲ್ಲಿ ನಿರ್ಮಾಣ
Published 23 ಜೂನ್ 2023, 13:39 IST
Last Updated 23 ಜೂನ್ 2023, 13:39 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದ ಹೊರವಲಯದಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಘಟಕದಿಂದ ದಂಡೋತಿ-ಮರಗೋಳ ಕೂಡು ರಸ್ತೆಯವರೆಗೆ ರಾಜ್ಯ ಹೆದ್ದಾರಿ-126 ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿ ಪೂರ್ಣಗೊಂಡು ಸಾರಿಗೆ ಸಂಚಾರಕ್ಕೆ ಅನುಕೂಲವಾಗಿದೆ.

2022ರಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್-436ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ತೆಲಂಗಾಣ ಬಾರ್ಡರ್ ಪುಟಪಾಕದಿಂದ ಭೋಸಗಾವರೆಗೆ 60 ಕಿ.ಮೀ– 75 ಕಿ.ಮೀ ವರೆಗೆ (ಆಯ್ದ ಭಾಗಗಳಲ್ಲಿ) ₹ 9.50 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು.

ಈ ರಸ್ತೆಯು ಮಳಖೇಡ, ಸೇಡಂ, ಕಾಳಗಿ, ಕಲಬುರಗಿ ನಗರಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ.

ಈ ಹೆದ್ದಾರಿಯಲ್ಲಿ ತಾಲ್ಲೂಕಿನ ವಾಡಿಯ ಎಸಿಸಿ ಸಿಮೆಂಟ್ ಕಂಪೆನಿ, ಇಟಗಾದ ಓರಿಯೆಂಟ್ ಸಿಮೆಂಟ್ ಕಂಪೆನಿ, ಸೇಡಂ ತಾಲ್ಲೂಕಿನ ವಾಸವದತ್ತಾ ಸಿಮೆಂಟ್ ಕಂಪೆನಿ, ಮಳಖೇಡದ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಂಪೆನಿಗೆ ಕಚ್ಚಾ ಸಂಪನ್ಮೂಲ ತುಂಬಿಕೊಂಡು ಬರುವ, ಮತ್ತು  ಸಿಮೆಂಟ್ ತುಂಬಿಕೊಂಡು ತೆರಳುವ ಬೃಹತ್ ಗಾತ್ರದ ಟ್ಯಾಂಕರ್, ಲಾರಿಗಳು ನಿತ್ಯವೂ ಸಂಚರಿಸುತ್ತವೆ. ತೆಂಗಳಿ ಕ್ರಾಸಿನಿಂದ ದಂಡೋತಿ ಗ್ರಾಮದ ಮಾರ್ಗವಾಗಿ ಚಿತ್ತಾಪುರಕ್ಕೆ ಹತ್ತು ಕಿ.ಮೀ ರಸ್ತೆ ಕ್ರಮಿಸಿ ಬರಲು ಅರ್ಧ ಗಂಟೆಗಿಂತ ಅಧಿಕ ಸಮಯ ತಗುಲುತ್ತಿತ್ತು. ಅಷ್ಟೊಂದು ರಸ್ತೆ ಹಾಳಾಗಿತ್ತು. ಪ್ರಯಾಣಿಕರು ನಿತ್ಯವೂ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದರು.

ಸಂಚಾರಕ್ಕೆ ಸಮಸ್ಯೆಯಾಗಿದ್ದ ರಸ್ತೆ: ಕಳೆದ ಮೂರು ವರ್ಷಗಳಿಂದ ಈ ಹೆದ್ದಾರಿಯು ಸಂಪೂರ್ಣ ಹದಗೆಟ್ಟು ಹಾಳಾಗಿತ್ತು. ಇಡೀ ರಸ್ತೆ ತೆಗ್ಗು ಗುಂಡಿಗಳಾಗಿ ಮಾರ್ಪಟ್ಟಿತ್ತು. ಮಳೆಗಾಲದಲ್ಲಂತೂ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಳ್ಳುತ್ತಿದ್ದರು. ಟ್ಯಾಂಕರ್ ಮತ್ತು ಲಾರಿಗಳು ಉರುಳಿ ಬಿದ್ದ ಘಟನೆಗಳು ಜರುಗಿದ್ದವು. ಬೇಸಿಗೆಯಲ್ಲಿ ದೂಳಿನ ಕಾಟದಿಂದ ಬೈಕ್ ಸವಾರರು ಕಂಗಾಲಾಗಿದ್ದರು. ಜೀವಭಯದಿಂದ ಸಂಚಾರ ಮಾಡುವ ಪರಿಸ್ಥಿತಿಯಿತ್ತು. ರಸ್ತೆ ಹದಗೆಟ್ಟ ಪರಿಸ್ಥಿತಿಯ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.

ಬಸ್ ಘಟಕದಿಂದ ದಂಡೋತಿ-ಮರಗೋಳ ಕೂಡು ರಸ್ತೆಯವರೆಗೆ ದ್ವಿಪಥ ಹೆದ್ದಾರಿ ನಿರ್ಮಾಣ ಮಾಡಿದ್ದರಿಂದ ವಾಹನಗಳ ಸಂಚಾರ ಸುಗಮಗೊಂಡಿದೆ. ಹೊಸದಾಗಿ ನಿರ್ಮಾಣ ಮಾಡಿರುವ ರಸ್ತೆಯಿಂದ  ಪ್ರಯಾಣಿಕರು ಇದೇ ಮಾದರಿಯ ರಸ್ತೆ ಎಲ್ಲೆಡೆ ಇರಬೇಕು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT