ಶನಿವಾರ, ಮೇ 21, 2022
27 °C

ಮುಖ್ಯರಸ್ತೆ ಆಕ್ರಮಿಸಿದ ವಾಹನಗಳು, ಸಂಚಾರಕ್ಕೆ ತೀವ್ರ ತೊಂದರೆ, ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಪಟ್ಟಣದ ಮುಖ್ಯರಸ್ತೆ ಮೇಲೆ ಖಾಸಗಿ ವಾಹನಗಳ ಬೇಕಾಬಿಟ್ಟಿ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ವಾಡಿ– ಯಾದಗಿರಿ ಪ್ರಮುಖ ರಸ್ತೆ ಅಗಲೀಕರಣ ಮಾಡಲಾಗಿದೆ. ಕೆಲವು ಕಡೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ರಸ್ತೆ ಅಗಲೀಕರಣದಿಂದ ಸಂಚಾರ ಸಮಸ್ಯೆಗೆ ಬ್ರೇಕ್ ಬಿದ್ದು, ಸಂಚಾರ ತಾಪತ್ರಯ ನೀಗಲಿದೆ ಎಂಬ ಸಾರ್ವಜನಿಕರ ಆಸೆಗೆ ತಣ್ಣೀರು ಬಿದ್ದಿದೆ. ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ಟಂಟಂಗಳು, ದ್ವಿಚಕ್ರ ವಾಹನಗಳು, ಸರಕು ಸಾಗಣೆ ವಾಹನಗಳು ಸಂಚಾರಕ್ಕೆ ತೀವ್ರ ಸಂಕಷ್ಟ ತಂದೊಡ್ಡುತ್ತಿವೆ.

‘ರಸ್ತೆ ಇರುವುದು ವಾಹನಗಳ ಓಡಾಟಕ್ಕೆ ಹೊರತು ನಿಲ್ಲಿಸಲು ಅಲ್ಲ’ ಎಂಬ ನಿಯಮ ಇಲ್ಲಿ ತದ್ವಿರುದ್ಧ. ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳು ನಿಲ್ಲುವುದರಿಂದ ಪಾದಚಾರಿಗಳು ನಡೆದಾಡಲು ನಡುರಸ್ತೆಯನ್ನೇ ಆಶ್ರಯಿಸುವಂತಾಗಿದೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ.

ಹಳೆಯ ಬಸ್ ನಿಲ್ದಾಣ ಪ್ರದೇಶದಲ್ಲಿ ಬಳವಡ್ಗಿ, ಕೊಂಚೂರು, ಕಡಬೂರು, ಚಾಮನೂರು ಗ್ರಾಮಗಳಿಗೆ ತೆರಳುವ ಟಂಟಂಗಳು ಬಹುತೇಕ ರಸ್ತೆಗಳ ಮೇಲೆಯೇ ನಿಲ್ಲುತ್ತಿದ್ದು, ಇದರಿಂದ ಸಮಸ್ಯೆ ಉಂಟಾಗುತ್ತಿದೆ.

ಯಾದಗಿರಿಯಿಂದ ಪಟ್ಟಣದ ಮೂಲಕ ನಿತ್ಯ ಸುಮಾರು 50ಕ್ಕೂ ಅಧಿಕ ಬಸ್‌ಗಳು ಕಲಬುರ್ಗಿಗೆ ತೆರಳುತ್ತಿವೆ. ರಸ್ತೆ ಪಕ್ಕ ನಿಲ್ಲಲು ಸೂಕ್ತ ಸ್ಥಳವಕಾಶ ಇಲ್ಲದ ಕಾರಣ ಬಸ್‌ಗಳು ರಸ್ತೆ ಮಧ್ಯದಲ್ಲಿಯೇ ನಿಂತು ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಿರುವುದು ಸಹ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದೆ.

ಕಾಕಾ ಚೌಕ್ ವೃತ್ತ, ಶ್ರೀನಿವಾಸ್ ಗುಡಿ ಚೌಕ್ ವೃತ್ತ, ಕುಂದನೂರು ಚೌಕ್ ವೃತ್ತದಲ್ಲಿ ಸಹ ಬೇಕಾಬಿಟ್ಟಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಮುಖ್ಯರಸ್ತೆಯ ಎರಡು ಕಡೆಗಳಲ್ಲೂ ಟ್ರ್ಯಾಕ್ಟರ್, ಟಿಪ್ಪರ್, ಮಧ್ಯಮ ಹಾಗೂ ಭಾರಿ ಗಾತ್ರದ ವಾಹನಗಳು ನಿಲ್ಲುತ್ತಿದ್ದು, ಸಮಸ್ಯೆ ಉಲ್ಬಣಿಸಿದೆ. ಕೆಲವು ಕಡೆ ಕೆಟ್ಟುನಿಂತ ವಾಹನಗಳು ತಿಂಗಳುಗಟ್ಟಲೇ ರಸ್ತೆಗಳ ಮೇಲೆ ನಿಂತಿದ್ದರೂ ಕೇಳುವವರು ಇಲ್ಲದಾಗಿದೆ.

ಹಳೆ ಬಸ್ ನಿಲ್ದಾಣದಲ್ಲಿ ನಿಲ್ಲುವ ಬಸ್‌ಗಳಿಗೆ ಒಂದು ನಿರ್ದಿಷ್ಟ ಪ್ರದೇಶ ನಿಗದಿಪಡಿಸಬೇಕು ಹಾಗೂ ಖಾಸಗಿ ಟಂಟಂ, ಜೀಪುಗಳಿಗೆ ಸಹ ನಿಲ್ಲಲು ಸೂಕ್ತ ಸ್ಥಳ ನಿರ್ಧರಿಸಿ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಹಾಡಬೇಕು. ರಸ್ತೆ ಮೇಲೆಯೇ ದಿನಗಟ್ಟಲೇ ವಾಹನ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿರುವರವರ ವಿರುದ್ದ ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು