ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಕಾಳಗಿಯ ರೌದ್ರಾವತಿ ಈಗ ನಯನ ಮನೋಹರೆ

ಕಲುಷಿತಗೊಂಡಿದ್ದ ನದಿಯನ್ನು ಸ್ವಚ್ಛಗೊಳಿಸಿದ ಯುವ ಪಡೆ
Last Updated 18 ಜೂನ್ 2020, 19:30 IST
ಅಕ್ಷರ ಗಾತ್ರ

ಕಾಳಗಿ (ಕಲಬುರ್ಗಿ ಜಿಲ್ಲೆ): ಭೀಕರ ಬರದಲ್ಲೂ ಬತ್ತದ ಇಲ್ಲಿಯ ಐತಿಹಾಸಿಕ ರೌದ್ರಾವತಿ ನದಿಯನ್ನು ಯುವ ಪಡೆ ಸ್ವಚ್ಛಗೊಳಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿವರ್ಷಪೂರ್ತಿ ಹರಿಯುವ ಈ ನದಿಯಲ್ಲಿ ಕೆಲ ವರ್ಷಗಳಿಂದ ಜೇಕು, ಬಳ್ಳಿ ಬೆಳೆದು ನೀರು ಕಲುಷಿತಗೊಂಡಿತ್ತು. ಹಾಗೆಯೇ ನೀರಿನ ಪ್ರಮಾಣ ಕಡಿಮೆಯಾಗತೊಡಗಿತ್ತು.

ಪಟ್ಟಣಕ್ಕೆ ಬರುತ್ತಿದ್ದ ಪ್ರವಾಸಿಗರು ನದಿ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳಿಂದಲೂ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಜಿಲ್ಲಾಧಿಕಾರಿ ಬಂದು ನೋಡಿ ಹೋಗಿದ್ದರೂ ಪ್ರಯೋಜನ ಆಗಿರಲಿಲ್ಲ.

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಥಳೀಯ ಯುವಜನರು ನದಿಯನ್ನು ಸ್ವಚ್ಛಗೊಳಿಸಲು ಮುಂದಾದರು. ಎಂಟು ಮಂದಿಯಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ 30 ಮಂದಿ ಕೈಜೋಡಿಸಿದರು. ಮಾರ್ಚ್ ಮೊದಲ ವಾರದಿಂದ, ಕೊರೊನಾ ಲಾಕ್‌ಡೌನ್ ಮಧ್ಯೆಯೂ ಪರಸ್ಪರ ಅಂತರ ಕಾಯ್ದುಕೊಂಡು ಮೇ ತಿಂಗಳ ಕೊನೆಯವರೆಗೂ ಪ್ರತಿ ದಿನ ಬೆಳಿಗ್ಗೆ 7 ರಿಂದ 9ರ ವರೆಗೆ ಶ್ರಮ ಹಾಕಿದರು.

ದಾನಿಗಳಿಂದ ಕಟ್ಟಿಗೆ, ಬೊಂಬು, ಪ್ಲಾಸ್ಟಿಕ್ ಬ್ಯಾರಲ್, ಹಗ್ಗ, ಬುಟ್ಟಿ ಇತರ ಸಾಮಾಗ್ರಿಗಳನ್ನು ಪಡೆದು ತೆಪ್ಪ ಮಾಡಿಕೊಂಡು ನದಿಯಲ್ಲಿ ಸರಾಗವಾಗಿ ತೇಲಾಡಿ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.

ಝರಿಗಳಿಂದ ಹುಟ್ಟಿದ ನದಿ

ಈ ನದಿಯು ಇಲ್ಲೇ ನೈಸರ್ಗಿಕ ಝರಿಗಳಿಂದ ಹುಟ್ಟಿಕೊಂಡಿದ್ದು ಅರ್ಧ ಕಿಲೋಮೀಟರ್‌ನಷ್ಟು ಉದ್ದವಿದೆ. ಕನಿಷ್ಟ 10 ಅಡಿ ಆಳ ಮತ್ತು 50ರಿಂದ 60 ಅಡಿ ಅಗಲ ಇದೆ. ಮಳೆಗಾಲದಲ್ಲಿ ಮಾತ್ರ ಬೇರೆಡೆಯ ನೀರು ಇಲ್ಲಿಗೆ ಹರಿದು ಬರುತ್ತದೆ. ವರ್ಷಪೂರ್ತಿ ಸಮ ಪ್ರಮಾಣದಲ್ಲಿ ಇರುವ ಈ ನದಿಯ ನೀರು ಬಾಂದಾರ ಗೇಟ್ ಮೂಲಕ ಮುಂದಕ್ಕೆ ಹರಿದುಹೋಗಿ ಕಾಗಿಣಾ ನದಿ ಸೇರಿಕೊಳ್ಳುತ್ತದೆ. ಈ ಭಾಗದ ರೈತರ ಸಾವಿರಾರು ಎಕರೆ ಜಮೀನಿಗೆ ಈ ನೀರು ಆಧಾರವಾಗಿದೆ. ಈ ನದಿಯ ಪಕ್ಕದಲ್ಲೇ ನಾಲ್ಕು ಪುಷ್ಕರಣಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT