ಭಾನುವಾರ, ಆಗಸ್ಟ್ 14, 2022
20 °C

ದಕ್ಷಿಣ ಉಪವಿಭಾಗದ ಎಸಿಪಿ ಕಚೇರಿ ಬಳಿ ರೌಡಿ ಪರೇಡ್: ಡಿಸಿಪಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮುಲಾಜಿಲ್ಲದೇ ಗಡಿಪಾರು ಮಾಡಲಾಗುವುದು ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಡ್ಡೂರು ಶ್ರೀನಿವಾಸಲು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಮಿನಿ ವಿಧಾನಸೌಧದ ಹಿಂಬದಿಯಲ್ಲಿರುವ ದಕ್ಷಿಣ ಉಪವಿಭಾಗದ ಎಸಿಪಿ ಕಚೇರಿ ಬಳಿ ಸ್ಟೇಶನ್ ಬಜಾರ್, ಬ್ರಹ್ಮ‍ಪುರ, ಅಶೋಕ ನಗರ ಹಾಗೂ ರಾಘವೇಂದ್ರ ನಗರ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 700 ಜನ ರೌಡಿಗಳ ಮೇಲೆ ನಿರಂತರ ನಿಗಾ ವಹಿಸಿದ್ದೇವೆ. ಈಗಾಗಲೇ 10 ಜನರನ್ನು ಗಡಿಪಾರು ಮಾಡಲು ಪ್ರಸ್ತಾವವನ್ನು ಸಂಬಂಧಪಟ್ಟ ಠಾಣೆಗಳಿಂದ ತರಿಸಿಕೊಂಡಿದ್ದೇವೆ. ಈಗಾಗಲೇ ಒಬ್ಬನನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದೇವೆ’ ಎಂದರು.

‘ಬಾಪುನಗರ, ಬಸವ ನಗರ, ಮಾಂಗರವಾಡಿ, ಸುಂದರ ನಗರ ಸೇರಿದಂತೆ ವಿವಿಧ ಬಡಾವಣೆಗಳ ರೌಡಿ ಶೀಟರ್‌ಗಳು ಜಮೀನು, ಜಾಗದ ವ್ಯಾಜ್ಯವನ್ನು ಪರಿಹರಿಸುವ ಮಧ್ಯವರ್ತಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮಾಹಿತಿಗಳು ಬಂದಿವೆ. ಇಂತಹ ಕೆಲಸಗಳನ್ನು ಯಾರೂ ಮಾಡಬಾರದು. ಒಂದೊಮ್ಮೆ ಆ ಬಗ್ಗೆ ಮಾಹಿತಿ ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ನಗರದ ವಿವಿಧೆಡೆ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದಾಗ ಅಕ್ರಮವಾಗಿ ಶಸ್ತ್ರಾಸ್ತ್ರ ಇರಿಸಿಕೊಂಡವರನ್ನು ಬಂಧಿಸಿ ಜೈಲಿಗಟ್ಟಿದ್ದೇವೆ. ಯಾರೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಮಾಡುವುದಾಗಲೀ, ನಾಗರಿಕರನ್ನು ಹೆದರಿಸುವುದಾಗಲೀ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.

ದಕ್ಷಿಣ ಉಪವಿಭಾಗದ ಎಸಿಪಿ ಗಿರೀಶ್ ಎಸ್‌.ಬಿ. ಮಾತನಾಡಿ, ‘ನಗರದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ನಿಮ್ಮ ಪಾತ್ರ ಕಂಡು ಬಂದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ಗೂಂಡಾ ಕಾಯ್ದೆಯಡಿ ಬಂಧಿಸಲೂ ನಾವು ಹಿಂದೆ ಮುಂದೆ ನೋಡುವುದಿಲ್ಲ. ಉತ್ತಮ ನಡತೆ ತೋರಿದರೆ ರೌಡಿ ಪಟ್ಟಿಯಿಂದ ಕೈಬಿಡಲು ಪರಿಶೀಲಿಸಲಾಗುವುದು’ ಎಂದರು.

115: ಸ್ಟೇಶನ್ ಬಜಾರ್, ಬ್ರಹ್ಮಪುರ, ರಾಘವೇಂದ್ರ ನಗರ ಹಾಗೂ ಅಶೋಕ ನಗರ ಠಾಣೆಗಳ 115 ರೌಡಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.

ರಾಘವೇಂದ್ರ ನಗರ ಠಾಣೆ ಪಿಐ ಶಿವಾನಂದ ಗಾಣಿಗೇರ, ಸ್ಟೇಶನ್ ಬಜಾರ್ ಠಾಣೆ ಪಿಐ ಸಿದ್ದರಾಮೇಶ ಗಡೇದ, ಅಶೋಕ ನಗರ ಠಾಣೆ ಪಿಐ ಪಂಡಿತ ಸಗರ, ಬ್ರಹ್ಮಪುರ ಠಾಣೆ ಪಿಐ ರಾಘವೇಂದ್ರ ಎಚ್.ಎಸ್‌. ಇದ್ದರು.

 

‘ಕನ್ನಡ ಬರೋದಿಲ್ವಾ?’

ಹಿಂದಿಯಲ್ಲಿ ಮಾತನಾಡಲು ಮುಂದಾದ ರೌಡಿಯೊಬ್ಬನಿಗೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು,‘ನಿನಗೆ ಕನ್ನಡ ಬರೋದಿಲ್ವಾ? ಕನ್ನಡ ಬರುತ್ತಿದ್ದರೂ ಹಿಂದಿಯಲ್ಲೇಕೆ ಮಾತನಾಡುತ್ತಿದ್ದೀಯಾ’ ಎಂದು ಪ್ರಶ್ನಿಸಿದರು.

ಸ್ವತಃ ತೆಲುಗು ಭಾಷಿಕರಾದ ಅಡ್ಡೂರು ಶ್ರೀನಿವಾಸಲು ಅವರು ಕನ್ನಡದಲ್ಲೇ ಎಲ್ಲ ರೌಡಿಗಳೊಂದಿಗೆ ಮಾತನಾಡಿ ಎಚ್ಚರಿಕೆ ನೀಡಿದರು.

 

ಕಾನೂನು ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲಾಗುವುದು. ಅವರಿಗೆ ಯಾವುದೇ ರಾಜಕೀಯ ಮುಖಂಡರ ಬೆಂಬಲವಿದ್ದರೂ ನಾವು ಬಿಡುವುದಿಲ್ಲ
ಅಡ್ಡೂರು ಶ್ರೀನಿವಾಸಲು

-ಡಿಸಿಪಿ (ಕಾನೂನು, ಸುವ್ಯವಸ್ಥೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು