ವಾಡಿ: ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಗುರುವಾರ 2 ನಾಗರ ಹಾವುಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನುವ ವಿಷಯ ಜನರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಗ್ರಾ.ಪಂ ಪಿಡಿಒ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅವು ಗೊಬ್ಬರ ಗಿಡದ ಕಾಯಿಗಳು ಎಂಬುದು ತಿಳಿದು, ಜನ ನಿರಾಳವಾದರು.
ಸಾರ್ವಜನಿಕ ನಳಗಳ ಮೂಲಕ ನೀರು ತುಂಬಿಸುತ್ತಿದ್ದಾಗ ಹಾವಿನ ಪೊರೆಗಳ ಹೋಲುವ ಪದಾರ್ಥ ಬರುತ್ತಿದೆ ಎಂದು ಭಾವಿಸಿ ಕೆಲ ಯುವಕರು ಟ್ಯಾಂಕ್ ಇಣುಕಿ ನೋಡಿದಾಗ ಎರಡು ಹಾವುಗಳು ಸತ್ತು ನೀರಿನಲ್ಲಿ ಬಿದ್ದ ರೀತಿಯಲ್ಲಿ ಕಾಣಿಸಿಕೊಂಡಿದೆ. ಈ ವಿಷಯ ಊರ ತುಂಬಾ ಹರಡಿದ್ದರಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣಾವಾಯಿತು. ಪಂಚಾಯಿತಿ ಸಿಬ್ಬಂದಿ ಸಹ ಟ್ಯಾಂಕ್ ನಲ್ಲಿ ಹಾವು ಬಿದ್ದಿದ್ದು, ನೀರು ಕುಡಿಯಲು ಬಳಸದಿರುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ಹಾಜಿಸರ್ವರ ದರ್ಗಾದ ಬೆಳ್ಳಿ ಕುದುರೆ ಉತ್ಸವ ಇದ್ದುದ್ದರಿಂದ ಗ್ರಾಮಸ್ಥರು ಮನೆಯಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಂಡಿದ್ದರು. ನಂತರ ಗಾಬರಿಯಾಗಿ ನೀರನ್ನು ಹೊರ ಚೆಲ್ಲಿದರು.
ದಲಿತರ ಬಡಾವಣೆ, ಹನುಮಾನ ನಗರ, ನಿಜಾಮ್ ಬಂಡಿ ಪ್ರದೇಶ ಹಾಗೂ ಬಸ್ ಸ್ಟಾಂಡ್ ಪ್ರದೇಶಗಳಿಗೆ ಈ ನೀರು ಪೂರೈಕೆಯಾಗುತ್ತಿದ್ದು ಸಾರ್ವಜನಿಕರು ಕುಡಿಯಲು ಬಳಸುತ್ತಾರೆ. ಇದರಿಂದ ಬಡಾವಣೆಗಳ ಜನರು ಗಾಬರಿಗೊಂಡು ಸ್ಥಳೀಯ ಪಂಚಾಯಿತಿಯು ಟ್ಯಾಂಕ್ ಸ್ವಚ್ಛತೆಯಲ್ಲಿ ನಿರ್ಲಕ್ಷ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆರೆದ ಸ್ಥಿತಿಯಲ್ಲಿ ಟ್ಯಾಂಕ್: ಸಾವಿರಾರು ಜನರ ಹೊಟ್ಟೆ ಸೇರುವ ನೀರಿನ ಸಂಗ್ರಹಕ್ಕೆ ಇರುವ ಟ್ಯಾಂಕ್ ಮುಚ್ಚಳ ಹಾಕದೇ ಹಾಗೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಪಕ್ಕದ ಹಲಕರ್ಟಿ ಗ್ರಾಮದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಮುಚ್ಚಳವಿಲ್ಲದ ನೀರಿನ ಟ್ಯಾಂಕ್ ಒಳಗಡೆ 30ಕ್ಕೂ ಅಧಿಕ ಮಂಗಗಳು ಬಿದ್ದು ಸತ್ತಿದ್ದವು. ಇದರಿಂದ ಎಚ್ಚೆತ್ತುಕೊಂಡ ತಾ.ಪಂ ಆಡಳಿತ ಹಳ್ಳಿಗಳಲ್ಲಿನ ನೀರಿನ ಎಲ್ಲಾ ಮೇಲ್ತೊಟ್ಟಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಹಾಗೂ ಟ್ಯಾಂಕ್ ಸುತ್ತಲೂ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿತ್ತು. ಈ ನಡುವೆಯೂ ನೀರಿನ ಟ್ಯಾಂಕ್ ಮುಚ್ಚದೇ ಸ್ಥಳೀಯ ಲಾಡ್ಲಾಪುರ ಗ್ರಾ.ಪಂ ನಿರ್ಲಕ್ಷ್ಯ ವಹಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.