ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Russia Ukraine Conflict: ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿ ಯುವತಿ

Last Updated 24 ಫೆಬ್ರುವರಿ 2022, 13:37 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿಯ ಯುವತಿ ಜೀವಿತಾ ಶಿಂಧೆ ಅವರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಅಲ್ಲಿನ ಕೀವ್‌ ನಗರದ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್‌ ಓದುತ್ತಿರುವ ಜೀವಿತಾ, ಗುರುವಾರ ಮಧ್ಯಾಹ್ನ ಪಾಲಕರೊಂದಿಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡಿದ್ದು, ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.

ಜೀವಿತಾ ಅವರ ತಾಯಿ ಡಾ. ಜೆ.ಲಲಿತಾ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಬಯೊಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು. ತಂದೆ ಡಾ.ಮನೋಹರ ಶಿಂಧೆ ಅವರು ತುಮಕೂರು ವಿಶ್ವವಿದ್ಯಾಲಯದ ಬಯೊಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು. ಅವರ ಇನ್ನೊಬ್ಬ ಪುತ್ರ ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದಾರೆ.

‘ನಗರದ ಎಸ್‌ಬಿಆರ್‌ ಕಾಲೇಜಿನಲ್ಲಿ ಓದಿದ ಜೀವಿತಾ ಅವರು ಮೂರೂವರೆ ವರ್ಷದ ಹಿಂದೆ ಎಂಬಿಬಿಎಸ್‌ಗಾಗಿ ಉಕ್ರೇನ್‌ಗೆ ತೆರಳಿದ್ದಾರೆ. ಬುಧವಾರ (ಫೆ.23) ಅವರ 7ನೇ ಸೆಮಿಸ್ಟರ್‌ನ ಪರೀಕ್ಷೆ ಮುಗಿದಿವೆ. ಮಾರ್ಚ್‌ 8ರಂದು ಭಾರತಕ್ಕೆ ಮರಳಲು ಅವರು ಟಿಕೆಟ್‌ ಬುಕ್‌ ಮಾಡಿದ್ದಾರೆ’ ಎಂದು ಅವರ ತಾಯಿ ಲಲಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಕೀವ್‌ ನಗರದ ಹೊರವಲಯದಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಬಿದ್ದಿದೆ. ನಗರದೊಳಗೆ ಯಾವುದೇ ತೊಂದರೆ ಆಗಿಲ್ಲ. ನೀರು, ಆಹಾರ ಸಂಗ್ರಹಿಸುವುದಕ್ಕೆ ಜನರು ಅಂಗಡಿಗಳ ಎದುರು ಸಾಲಾಗಿ ನಿಂತಿದ್ದು, ನಾನೂ ಸಂಗ್ರಹಿಸಿದ್ದೇನೆ. ಹಲವರು ಎಟಿಎಂಗಳಿಗೆ ಹೋಗಿ ಸಿಕ್ಕಷ್ಟು ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಇನ್ನಷ್ಟು ದಿನ ಪರಿಸ್ಥಿತಿ ಹೀಗೇ ಮುಂದುವರಿದರೆ ನೀರು, ಆಹಾರದ ಸಮಸ್ಯೆ ಆಗುವ ಸಾಧ್ಯತೆ ಇದೆ’ ಎಂದೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘15 ದಿನಗಳ ಹಿಂದಿನಿಂದಲೂ ಯುದ್ಧದ ಮಾತು ಕೇಳಿಬರುತ್ತಿದ್ದವು. ಅಲ್ಲದೇ, ನಗರದಲ್ಲಿರುವ ಅಡಗು ಬಂಕರ್‌ಗಳ ಬಗ್ಗೆ ನಕಾಶೆ ಕೂಡ ರವಾನಿಸಲಾಗುತ್ತಿತ್ತು. ಇಲ್ಲಿನ ಬಹಳಷ್ಟು ಅಪಾರ್ಟ್‌ಮೆಂಟ್‌ ಕೆಳಗೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲೂ ದೊಡ್ಡ ಬಂಕರ್‌ಗಳಿವೆ. ಬಾಂಬ್‌ ದಾಳಿ ನಡೆದರೆ ಅಲ್ಲಿ ಸಾಕಷ್ಟು ಜನ ರಕ್ಷಣೆ ಪಡೆಯಬಹುದು. ಈ ಬಗ್ಗೆ ಉಕ್ರೇನ್‌ ಸರ್ಕಾರ ನಿರಂತರ ಸಂದೇಶ ನೀಡುತ್ತಿದೆ’ ಎಂದೂ ಜೀವಿತಾ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಲೇಜು ರಜೆ ಇದ್ದ ಕಾರಣ ಜೀವಿತಾ ಅವರು ಕಲಬುರಗಿಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT