ಅಫಜಲಪುರ: ‘ತಾಲ್ಲೂಕಿನ ಆನೂರ ಗ್ರಾಮದಲ್ಲಿ ಸಾಕಷ್ಟು ನೈರ್ಮಲ್ಯ ಸಮಸ್ಯೆ ಕಾಡುತ್ತಿದೆ. ಇಲ್ಲಿನ ಜನ ಸಮಸ್ಯೆಗಳಿಂದ ರೋಸಿ ಹೋಗಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಯಾಕೆ ಪಂಚಾಯಿತಿಯವರು ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ತಾ.ಪಂ ಇಒ ವೀರಣ್ಣ ಕವಲಗಿ ಬೇಸರ ವ್ಯಕ್ತಪಡಿಸಿದರು.
ಆನೂರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಚರಂಡಿಗಳು ಸರಿಯಾಗಿಲ್ಲ. ಎಲ್ಲೆಂದರಲ್ಲಿ ಚರಂಡಿ ನೀರು ನಿಂತು ದುರ್ನಾತ ಬೀರುತ್ತಿವೆ. ಕಂಟಿ ಬೆಳೆದು ನಿಂತಿವೆ. ಸ್ಥಳೀಯವಾಗಿ ಪಂಚಾಯಿತಿ ಇದ್ದರೂ ಕೂಡ ಯಾಕೆ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಪಿಡಿಒ ಚಿದಾನಂದ ಆಲೆಗಾಂವ ಅವರಿಗೆ ತರಾಟೆಗೆ ತೆಗೆದುಕೊಂಡರು.
‘ಗ್ರಾಮದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಯಾಕೆ ಹಿಂದೇಟು ಹಾಕುತ್ತಿದ್ದೀರಿ? ಅನುದಾನದ ಕೊರತೆ ಇದೆಯೇ? ಎರಡು ದಿನಗಳಲ್ಲಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಮಾಡಿ ಇಲ್ಲವಾದರೆ ನಾನೇ ಇನ್ನೊಮ್ಮೆ ಬಂದು ನನ್ನ ಸ್ವಂತ ಖರ್ಚಿನಲ್ಲಿ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ’ ಎಂದು ಸಿಡಿಮಿಡಿಗೊಂಡ ಅವರು ಗ್ರಾಮದಲ್ಲಿ ಕನಿಷ್ಠಠ 3 ತಿಂಗಳಿಗೊಮ್ಮೆಯಾದರೂ ಸ್ವಚ್ಛತಾ ಕೆಲಸ ಮಾಡಿಸಿ. ಪಂಚಾಯಿತಿಯಲ್ಲಿ ಸ್ವಚ್ಛಗೊಳಿಸುವ ಸಿಬ್ಬಂದಿಯಿಲ್ಲದಿದ್ದರೆ ನೇಮಕ ಮಾಡಿಕೊಳ್ಳಿ. ಒಟ್ಟಿನಲ್ಲಿ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
‘ಗ್ರಾಮದ ಬಸ್ ನಿಲ್ದಾಣದಲ್ಲಿರುವ ಹೈಮಾಸ್ಟ್ ವಿದ್ಯುತ್ ದೀಪ ಅನೇಕ ದಿನಗಳಿಂದ ಬೆಳಕು ನೀಡುತ್ತಿಲ್ಲ. ಗ್ರಾಮದಲ್ಲಿ ಚರಂಡಿ ನಿರ್ವಹಣೆ ಸರಿಯಾಗಿಲ್ಲ. ನೀರು ಸರಬರಾಜು ಸರಿಯಾಗಿಲ್ಲ. ಚರಂಡಿ ನೀರು ಮುಖ್ಯ ರಸ್ತೆಗಳ ಮೇಲೆ ನಿಂತು ಸಾಂಕ್ರಾಮಿಕ ರೋಗದ ತಾಣವಾಗಿವೆ. ಮುಖ್ಯ ರಸ್ತೆಯ ಪಕ್ಕದಲ್ಲಿ ಬೆಳೆದ ಜಾಲಿ ಕಂಟಿಗಳ ತೆರವು ಮಾಡಿಸಬೇಕು. ಗ್ರಾಮದ ಸಮಸ್ಯೆಗಳ ಕುರಿತು ಪಿಡಿಒ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗುತ್ತಿಲ್ಲ. ಮಳೆ ಬಂದರೆ ಗ್ರಾಮದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಹಾಳಾಗಿ ಹೋಗಿವೆ. ಪ್ರತಿ ವಾರ್ಡಿನಲ್ಲಿ ಕಸ ತುಂಬಿಕೊಂಡಿದೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ತಾಲೂಕು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದೀರಿ. ನಿಮ್ಮ ಮೂಲಕವಾದರೂ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ’ ಎಂದು ಗ್ರಾಮಸ್ಥರು ತಾ.ಪಂ ಇಒ ಅವರಿಗೆ ಮನವಿ ಮಾಡಿಕೊಂಡರು.
ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ, ಪಿಡಿಒ ಚಿದಾನಂದ ಆಲೆಗಾಂವ್ ಹಾಗೂ ಗ್ರಾ.ಪಂ ಸದಸ್ಯರು, ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.