ಸೋಮವಾರ, ಜನವರಿ 20, 2020
29 °C
ಯರಗೋಳ: ಶೌಚಾಲಯವಿಲ್ಲ, ಕುಡಿಯಲು ನೀರಿಲ್ಲ; ಮಕ್ಕಳ ಸಮಸ್ಯೆ ಕೇಳುವವರೇ ಇಲ್ಲ

ಸಮಸ್ಯೆಗಳ ಸುಳಿಯಲ್ಲಿ ಪ್ರಾಥಮಿಕ ಶಾಲೆ

ತೋಟೇಂದ್ರ ಎಸ್ ಮಾಕಲ್ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು, ಕುಸಿಯುವ ಹಂತದಲ್ಲಿರುವ ಶಾಲಾ ಕಟ್ಟಡ– ಇದು ಯರಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸದ್ಯದ ದುಸ್ಥಿತಿ.

ಶಾಲೆಯಲ್ಲಿ ಒಟ್ಟು 549 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗುತ್ತಿದೆ. ಈ ಪ್ರಾಥಮಿಕ ಶಾಲೆಗೆ 18 ಜನ ಶಿಕ್ಷಕರ ಅವಶ್ಯಕತೆ ಇದ್ದು, ಸದ್ಯ ಕೇವಲ 6 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಭಾರಿ ಮುಖ್ಯ ಶಿಕ್ಷಕ, ಒರ್ವ ದೈಹಿಕ ಶಿಕ್ಷಣ ಶಿಕ್ಷಕ ಸೇವೆ ಸಲ್ಲಿಸುತ್ತಿದ್ದು, ಉಳಿದ ನಾಲ್ವರು ಶಿಕ್ಷಕರು ಮಾತ್ರ ಪಾಠ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಯರಗೋಳ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಆಶಪ್ಪ ಇದುವರೆಗೂ ಅಧಿಕಾರ ಸ್ವೀಕರಿಸಿಲ್ಲ. ಶಾಲಾಭಿವೃದ್ಧಿ ಮಂಡಳಿಯು ರಚನೆಯಾಗದೆ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಕುಳಿತುಕೊಳ್ಳುವ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಕೊಠಡಿಗಳು  ಇಂದು-ನಾಳೆ ಬೀಳುವಂತಿವೆ. ವಿದ್ಯಾರ್ಥಿಗಳು ಭಯದಲ್ಲಿ ಕಲಿಯುವ ಸ್ಥಿತಿ ನಿರ್ಮಾ ಣವಾಗಿದೆ.

ಶೌಚಾಲಯವೇ ಇಲ್ಲ: ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲದೆ ಪರದಾಡುವಂತಾಗಿದೆ. ಮೂತ್ರ ವಿಸರ್ಜನೆಗಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಗಂಡು ಮಕ್ಕಳು ಹೇಗೋ ಹೊರಗಡೆ ಹೋಗಬಹುದು, ಆದರೆ ಹೆಣ್ಣು ಮಕ್ಕಳು ಏನು ಮಾಡಬೇಕು. ನಮ್ಮ ಗೋಳು ಕೇಳುವವರೇ ಇಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು. 

ಕುಡಿಯಲು ನೀರಿಲ್ಲ: ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲ. ಗ್ರಾಮದ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬರುತ್ತಿದ್ದು, ಆ ನೀರನ್ನೇ ವಿದ್ಯಾರ್ಥಿಗಳು ಕುಡಿಯಬೇಕಾಗಿದೆ.  ಬಿಸಿಯೂಟ ತಯಾರಿಕೆಗೂ ಈ ನೀರನ್ನೇ ಬಳಸುತ್ತಿದ್ದಾರೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.  

‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದರು.  

ಮಕ್ಕಳಿಗೆ ಕುಡಿಯಲು ಶುದ್ಧವಾದ ಕುಡಿಯುವ ನೀರಿಲ್ಲ. ಶಿಕ್ಷಕರ ಕೊರತೆಯಿದ್ದು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ ಅನ್ನುತ್ತಾರೆ ಪಾಲಕರಾದ ಸಲೀಂ ಪಾಷಾ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು