ಗುರುವಾರ , ಮಾರ್ಚ್ 30, 2023
32 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಕಾರ್ಯದರ್ಶಿಗಳ ತರಬೇತಿ ಸಮಾರಂಭದಲ್ಲಿ ಸಚಿವ ನಿರಾಣಿ

100 ಶಾಖೆ ತೆರೆಯುವ ಗುರಿ ಹಾಕಿಕೊಳ್ಳಿ: ಮುರುಗೇಶ್‌ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಮುಂದಿನ ಐದು ವರ್ಷಗಳಲ್ಲಿ ಕಲಬುರಗಿ–ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)ನ 100 ಶಾಖೆಗಳನ್ನು ಆರಂಭಿಸುವ ಗುರಿ ಹಾಕಿಕೊಂಡು ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಲಹೆ ನೀಡಿದರು.

ಕಲಬುರಗಿ–ಯಾದಗಿರಿ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ವತಿಯಿಂದ ಸೋಮವಾರ ಇಲ್ಲಿನ ಎಸ್‌.ಎಂ.ಪ‍ಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಮೊಬೈಲ್ ಬ್ಯಾಂಕಿಂಗ್ ವಾಹನಗಳ ಲೋಕಾರ್ಪಣೆ ಮತ್ತು 300 ವ್ಯವಸಾಯ ಸಹಕಾರ ಸಂಘಗಳಿಗೆ ಮಿನಿ ಎಟಿಎಂಗಳ ವಿತರಣೆ ಹಾಗೂ ಪ್ರಾಥಮಿಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು.

‘ಸಹಕಾರ ಬ್ಯಾಂಕ್‌ ನಡೆಸುವವರು ಒಮ್ಮೊಮ್ಮೆ ಮುಲಾಜು ಬಿಟ್ಟು ಸಾಲ ವಸೂಲಿ ಮಾಡಬೇಕಾಗುತ್ತದೆ. ಅಂದಾಗ ಮಾತ್ರ ಬ್ಯಾಂಕ್‌ನ ಭವಿಷ್ಯ ಭದ್ರವಾಗಿರುತ್ತದೆ. ಅರ್ಹರಿಗೆ ಸಾಲ ನೀಡುವುದರ ಜತೆಗೆ ಅದನ್ನು ಕಾಲಮಿತಿಯಲ್ಲಿ ವಾಪಸ್‌ ಮಾಡುವಂತೆ ನೋಡಿಕೊಳ್ಳುವುದರಲ್ಲಿ ಬ್ಯಾಂಕ್‌ನ ಯಶಸ್ಸು ಅಡಗಿದೆ’ ಎಂದರು.

‘ನಾನು ಸಕ್ಕರೆ ಕಾರ್ಖಾನೆ ಆರಂಭಿಸುವುದರ ಜತೆಗೆ ಸಹಕಾರ ಬ್ಯಾಂಕ್‌ ಆರಂಭಿಸಿದರೆ ಹೇಗೆ ಎಂದುಕೊಂಡು ₹ 17 ಲಕ್ಷ ಷೇರುಗಳನ್ನು ಸಂಗ್ರಹಿಸಿ ಬ್ಯಾಂಕ್ ಆರಂಭಿಸಿದೆ. ಇಂದು ಬಹಳ ದೊಡ್ಡದಾಗಿ ಬೆಳೆದು ₹ 1,200 ಕೋಟಿ ಠೇವಣಿ ಸಂಗ್ರಹವಾಗಿದೆ. ರಾಜ್ಯದಾದ್ಯಂತ 125 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್‌ ನಿರ್ವಹಣೆಗೆ ಅಗತ್ಯ ಕೌಶಲವಿರುವ ಸಿಬ್ಬಂದಿ ನೇಮಕ ಮಾಡುವುದರ ಜತೆಗೆ ಆರ್ಥಿಕ ಶಿಸ್ತನ್ನು ಪಾಲಿಸಿದರೆ ಬ್ಯಾಂಕ್ ನಷ್ಟಕ್ಕೀಡಾಗುವುದಿಲ್ಲ’ ಎಂದು ಸಚಿವ ನಿರಾಣಿ ಹೇಳಿದರು.

‘ಡಿಸಿಸಿ ಬ್ಯಾಂಕ್‌ ಮೂಲಕ ಸಾಂಪ್ರದಾಯಿಕವಾಗಿ ರೈತರಿಗೆ ಸಾಲ ವಿತರಣೆ ಮಾಡುವುದರ ಜತೆಗೆ ಹಲವು ಹೊಸ ಮಾದರಿಗಳನ್ನು ಹಾಕಿಕೊಳ್ಳುವುದು ಅಗತ್ಯವಾಗಿದೆ. ಈ ಭಾಗದಲ್ಲಿ ತೊಗರಿ ಬೆಳೆಯುವ ರೈತರು ಗೋದಾಮುಗಳ ಸೌಲಭ್ಯ ಇಲ್ಲದ್ದರಿಂದ ಸಿಕ್ಕ ಬೆಲೆಗೆ ಮಾರುತ್ತಾರೆ. ಅದನ್ನು ತಡೆಯುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದಲೇ ಗೋದಾಮು ನಿರ್ಮಿಸಬಹುದು. ಇದಕ್ಕೆ ಸರ್ಕಾರ ಶೇ 50ರಷ್ಟು ಸಬ್ಸಿಡಿ ಕೊಡುತ್ತದೆ. ರೈತರ ತೊಗರಿಯನ್ನು ಗೋದಾಮಿನಲ್ಲಿ ಇರಿಸಿಕೊಂಡು ಅವರಿಗೆ ಬ್ಯಾಂಕ್‌ನಿಂದಲೇ ಸಾಲ ಕೊಡಬಹುದು. ಇದರಿಂದ ಸಾಲ ಮರುಪಾವತಿಯ ಚಿಂತೆಯೂ ಬ್ಯಾಂಕಿಗೆ ಇಲ್ಲವಾಗುತ್ತದೆ. ರೈತರಿಗೂ ಉತ್ತಮ ಬೆಲೆ ಸಿಗುತ್ತದೆ’ ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ಮುನ್ನ ಬ್ಯಾಂಕ್‌ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ಇದೀಗ ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ತಂದು ರೈತರಿಗೆ ಹಂಚಿಕೆ ಮಾಡಲಾಗಿದ್ದು, ಮರುಪಾವತಿಯ ಪ್ರಮಾಣವೂ ಸುಧಾರಿಸಿದೆ. ಹೀಗಾಗಿ 11ನೇ ಸ್ಥಾನಕ್ಕೆ ಏರಿದೆ. ಮುಂದಿನ ದಿನಗಳಲ್ಲಿ 5ನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇವೆ. ಬ್ಯಾಂಕ್‌ ನಷ್ಟದ ಸುಳಿಯಿಂದ ಹೊರತರಲು ಹೊಸ ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ, ‘1 ಲಕ್ಷ ಹೊಸ ರೈತರಿಗೆ ಬ್ಯಾಂಕ್‌ನಿಂದ ₹ 176 ಕೋಟಿ ಸಾಲವನ್ನು ವಿತರಿಸಲಾಗಿದೆ. ಸಾಲವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಬೇಕು’ ಎಂದು ಅವರು ಹೇಳಿದರು.

ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಮಾನಕರ, ಶರಣಪ್ಪ ಅಷ್ಠಗಾ, ಸೋಮಶೇಖರ ಗೋನಾಯಕ, ಕಲ್ಯಾಣಪ್ಪ ಪಾಟೀಲ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ದಿವಾಕರ ಎ.ಸಿ., ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು