ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ದಕ್ಷಿಣದಲ್ಲಿ ಹೊಸ ಮುಖದ ಆದ್ಯತೆಗೆ ಕೂಗು!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದ ನಾಲ್ವರು ಟಿಕೆಟ್ ಆಕಾಂಕ್ಷಿಗಳು
Last Updated 19 ಮಾರ್ಚ್ 2023, 5:03 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲೆಯ ಪ್ರತಿಷ್ಠೆಯ ಕಣವಾದ ಕಲಬುರಗಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಳೆದ ಬಾರಿ ಸ್ಪರ್ಧಿಸಿದ್ದ ಅಲ್ಲಮಪ್ರಭು ಪಾಟೀಲ ಅವರ ಬದಲಾಗಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಿದರೆ ಗೆಲುವು ಸಾಧ್ಯವಾಗಲಿದೆ’ ಎಂದು ನಾಲ್ವರು ಟಿಕೆಟ್ ಆಕಾಂಕ್ಷಿಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಿಗೆ ಮನವಿ ಸಲ್ಲಿಸಿರುವುದು ಇದೀಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಟಿಕೆಟ್ ಆಕಾಂಕ್ಷಿಗಳಾದ ಸಂತೋಷ ಬಿಲಗುಂದಿ, ಅಶೋಕ ವಿ. ಘೂಳಿ, ಕೃಷ್ಣಾಜಿ ಕುಲಕರ್ಣಿ ಮತ್ತು ಸಂತೋಷ ಪಾಟೀಲ ದುಧನಿ ಅವರು ಮಾರ್ಚ್ 15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಹೊಸ ಮುಖಕ್ಕೆ ಆದ್ಯತೆ ನೀಡುವಂತೆ ಕೋರಿದ್ದಾರೆ.

‘ಈ ಬಾರಿ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಬೇಕೆಂದು ನಾವು ಕೋರುತ್ತೇವೆ. ನೀವು ಯಾರಿಗೇ ಟಿಕೆಟ್ ಕೊಟ್ಟರೂ ನಾವೆಲ್ಲ ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಶ್ರಮಿಸುತ್ತೇವೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಅಭಿಪ್ರಾಯವೂ ಇದೇ ಆಗಿದೆ. ಇದರ ಬಗ್ಗೆ ನಿರ್ಧಾರ ತೆಗೆದುಕೊಂಡು ಆದಷ್ಟು ಬೇಗನೇ ಟಿಕೆಟ್ ಘೋಷಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮನವಿ ಪತ್ರವನ್ನುರಹಸ್ಯವಾಗಿ ಸಲ್ಲಿಸಲಾಗಿತ್ತು. ಆದರೆ, ನಾಲ್ವರ ಪೈಕಿ ಒಬ್ಬರು ಬಹಿರಂಗ ಮಾಡಿದ್ದು ಪಕ್ಷದ ಕಾರ್ಯಕರ್ತರ ಮಧ್ಯೆ ಅಚ್ಚರಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿಯೂ ಈ ಪತ್ರ ಹರಿದಾಡುತ್ತಿದೆ.

ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಎದುರು 5431 ಮತಗಳ ಅಂತರದಿಂದ ಅಲ್ಲಮಪ್ರಭು ಪಾಟೀಲ ಪರಾಭವ ಗೊಂಡಿದ್ದರು. ಹೀಗಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅವಕಾಶ ಸಿಗಬಹುದು ಎಂಬ ಉದ್ದೇಶ ದಿಂದ ಅಂದಿನಿಂದಲೇ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದಾರೆ.

ರಾಹುಲ್ ಗಾಂಧಿ ಅವರು ಈ ಬಾರಿ ಯುವಕರಿಗೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡಬಹುದು ಎಂಬ ನಿರೀಕ್ಷೆಯಿಂದ ಯುವ ಕಾಂಗ್ರೆಸ್ ಮುಖಂಡ, ಎಚ್‌ಕೆಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅವರ ಪುತ್ರ ಸಂತೋಷ ಬಿಲಗುಂದಿ ಅವರೂ ಕೆಲ ವರ್ಷಗಳಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಚ್‌ಕೆಇ ಸೊಸೈಟಿಗೆ ಸೇರಿದ ಬೆಂಗಳೂರಿನ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾರೆ.

ಕೆಲ ತಿಂಗಳ ಹಿಂದೆ ಶಿವಕುಮಾರ್ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭೀಮಾಶಂಕರ ಬಿಲಗುಂದಿ ಅವರು ಎಚ್‌ಕೆಇ ಸಂಸ್ಥೆಯ ಕಚೇರಿಗೆ ಆಹ್ವಾನಿಸಿದ್ದರು. ಆ ಮೂಲಕ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಂತೋಷ ಬಿಲಗುಂದಿ ಅವರು ಕ್ಷೇತ್ರದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದ್ದು, ಹಲವು ಜನಪರ ಕೆಲಸಗಳನ್ನೂ ಮಾಡಿದ್ದನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ.

ಮತ್ತೊಂದೆಡೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಮೇಯರ್ ಶರಣ ಕುಮಾರ್ ಮೋದಿ ಅವರೂ ಕ್ಷೇತ್ರದಲ್ಲಿ ಸಂಚರಿಸುತ್ತಾ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗಳಿಗೆ ತಲುಪಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಆಪ್ತರಾಗಿರುವ ಮೋದಿ ಅವರೂ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು. ಪಕ್ಷದ ಹಿರಿಯ ಮುಖಂಡ, ಕ್ರಷರ್ ಉದ್ಯಮಿ ನೀಲಕಂಠರಾವ್ ಮೂಲಗೆ ಅವರೂ ಟಿಕೆಟ್ ಕೇಳಿದ್ದಾರೆ.

ಶರಣು ಮೋದಿ, ನಿಲಕಂಠರಾವ್ ಮೂಲಗೆ ಇಂತಹ ಪತ್ರ ನೀಡಿಲ್ಲ. ನಾಲ್ವರು ಮಾತ್ರ ಹೊಸಬರಿಗೆ ಟಿಕೆಟ್ ನೀಡಿ ಎನ್ನುವ ಮೂಲಕ ಪಕ್ಷದಲ್ಲಿ ತೀವ್ರ ಪೈಪೋಟಿ ಇದೆ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

‘ವರಿಷ್ಠರು ಹೇಳಿದಂತೆ ಪ್ರಚಾರ’

ಹೊಸಬರಿಗೆ ಟಿಕೆಟ್ ಕೊಡಬೇಕು ಎಂದು ಕೆಲವರು ಪತ್ರ ನೀಡಿರುವುದು ಗಮನಕ್ಕೆ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಕೇಳಬಹುದು. ಇದಕ್ಕೆ ನನ್ನ ತಕರಾರಿಲ್ಲ. ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದಲ್ಲಿ ಸಂಚರಿಸುವಂತೆ ಪಕ್ಷದ ವರಿಷ್ಠರು ನನಗೆ ಸೂಚಿಸಿದ್ದರು. ಅದರಂತೆ ನಾನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ಕೊರೊನಾ ಸಂದರ್ಭದಲ್ಲಿ ಜನರ ಸಂಕಟಗಳಿಗೆ ಸ್ಪಂದಿಸಿದ್ದೇನೆ. ಮದುವೆ, ಮುಂಜಿವೆ, ಅತಿವೃಷ್ಟಿ ಅನಾವೃಷ್ಟಿ ವೇಳೆ ಜನರೊಂದಿಗೆ ನಿಂತಿದ್ದೇನೆ. ಈ ಬಾರಿಯೂ ಟಿಕೆಟ್ ನೀಡಬೇಕು ಎಂದು ಕೋರಿ ಅರ್ಜಿ ಹಾಕಿದ್ದೇನೆ. ಮುಂದಿನದು ಪಕ್ಷದ ಮುಖಂಡರಿಗೆ ಬಿಟ್ಟಿದ್ದು.

–ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

‘ಕುಟುಂಬ ಆಡಳಿತ ಬದಲಿಸಬೇಕಿದೆ’

‘ಕಳೆದ 20 ವರ್ಷಗಳಿಂದ ಒಂದೇ ಕುಟುಂಬದ ಕೈಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರ ಸಿಲುಕಿದ್ದು, ಅದನ್ನು ಈ ಬಾರಿ ಬದಲಿಸಬೇಕು ಎಂಬ ಉದ್ದೇಶದಿಂದ ಹೊಸಬರಿಗೆ ಟಿಕೆಟ್ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದು ನಿಜ. ಆದರೆ, ಅದು ಆಂತರಿಕವಾಗಿ ಸಲ್ಲಿಸಿದ ಪತ್ರವಾಗಿತ್ತು. ಯಾರೋ ಬಹಿರಂಗ ಮಾಡಿದ್ದಾರೆ.

ಕ್ಷೇತ್ರದ ಜನರು ಹೊಸ ಮುಖ ಬೇಕು ಎನ್ನುತ್ತಿರುವ ಕಾರಣ ನಾವು ಪತ್ರ ಬರೆದಿದ್ದೆವು. ಅಂತಿಮವಾಗಿ ಪಕ್ಷದ ಹೈಕಮಾಂಡ್ ಯಾರಿಗೆ ಕೊಡುವುದೋ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನಾನೂ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನುವುದು ನಿಜ.

–ಸಂತೋಷ ಬಿಲಗುಂದಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT