ಮಂಗಳವಾರ, ಏಪ್ರಿಲ್ 7, 2020
19 °C
ಶನಿವಾರ ರಾತ್ರಿ ನಗರದಲ್ಲೇ ಮೊಕ್ಕಾಂ ಹೂಡಿದ್ದ ಆರೋಗ್ಯ ಸಚಿವ

ಕೊರೊನಾ ಶಂಕಿತರ ವಾರ್ಡ್‌ ಪರಿಶೀಲಿಸಿದ ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋವಿಡ್‌ 19 ಸೋಂಕಿನಿಂದ ನಗರದ ವೃದ್ಧ ಇತ್ತೀಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಭಾನುವಾರ ನಗರದ ಜಿಮ್ಸ್‌ ಹಾಗೂ ಕೊರೊನಾ ಶಂಕಿತರನ್ನು ಇರಿಸಲಾದ ಇಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಶನಿವಾರ ರಾತ್ರಿಯೇ ನಗರಕ್ಕೆ ಬಂದಿದ್ದ ಸಚಿವರು ಅಧಿಕಾರಿಗಳ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. 

ಭಾನುವಾರ ಬೆಳಿಗ್ಗೆ ಎರಡೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಲಾದ ವಿಶೇಷ ವಾರ್ಡ್‌ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಸೋಂಕು ತಗುಲಿದವರ ಚಿಕಿತ್ಸೆಗೆ ಬೇಕಾದಂತಹ ಎಲ್ಲ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ. ಸೋಂಕು ಬಂದ ತಕ್ಷಣ ಜನ ಸಾಯುವುದಿಲ್ಲ.‌ ಯಾರೂ ಹೆದರಬಾರದು. ಸೋಂಕಿಗೆ ಕಲಬುರ್ಗಿಯ ವೃದ್ಧ ಸಾವನ್ನಪ್ಪಿದ ಬಳಿಕ ಆತನ ಮನೆ ಸುತ್ತ–ಮುತ್ತ ಐದು ಕಿ.ಮೀ. ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಪ್ರದೇಶದಿಂದ ಜನರನ್ನು ಹೊರಬಾರದಂತೆ ಸೂಚನೆ ನೀಡಲಾಗಿದೆ’ ಎಂದರು.

ವೈದ್ಯರಿಗೂ ಚಿಕಿತ್ಸೆ: ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದೇನೆ.‌ ಜನರ ಆತಂಕ ಕಡಿಮೆ ಮಾಡಲು ಹಾಗೂ ತಕ್ಷಣವೇ ಸೋಂಕು ಪತ್ತೆಗೆ ಜಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸಲಾಗುತ್ತದೆ’ ಎಂದು ಹೇಳಿದರು.

ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಆಸ್ಪತ್ರೆಯೊಳಗಡೆ ಹೋಗುವ ಮುನ್ನ ಸಚಿವರು ಸ್ಯಾನಿಟೈಜರ್ ಬಳಕೆ ಮಾಡಿ ಮುಖಕ್ಕೆ ಎನ್–95 ಮಾಸ್ಕ್ ಧರಿಸಿದರು‌.‌ ಶ್ರೀರಾಮುಲು ಅವರೊಂದಿಗೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಡಾ.ಅವಿನಾಶ್ ಜಾಧವ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎ.ಜಬ್ಬಾರ್‌ ಇದ್ದರು.

ನಂತರ ಇಎಸ್‌ಐ ಆಸ್ಪತ್ರೆಗೂ ಭೇಟಿ ನೀಡಿ, 200 ಬೆಡ್‌ನ ಕೊರೊನಾ ಶಂಕಿತರ ವಾರ್ಡ್ ಪರಿಶೀಲಿಸಿದರು. ಅಲ್ಲದೇ, ಇಎಸ್ಐ ಹಾಗೂ ಜಿಮ್ಸ್ ಆಸ್ಪತ್ರೆಯ ವೈದ್ಯರ ಜೊತೆ ಸಭೆ ನಡೆಸಿದರು.

‘ತಪಾಸಣೆ ಮಾಡಿಸಿಕೊಳ್ಳದಿದ್ದರೆ ಕ್ರಮ’

ಕೊರೊನಾ ಸೋಂಕಿನ ಕುರಿತ ವದಂತಿಗಳಿಗೆ ಜನತೆ ಕಿವಿಗೊಡಬಾರದು. ಕೊರೊನಾ ಶಂಕಿತರು ತಪಾಸಣೆಗೆ ಒಳಗಾಗದಿದ್ದರೆ ಅಂಥವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಲೇಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು