ಶುಕ್ರವಾರ, ಜನವರಿ 27, 2023
25 °C
ಡಾ.ಮುರುಘರಾಜೇಂದ್ರ ಶ್ರೀಗಳ ಗುರುವಂದನಾ ಸಮಾರಂಭ

ಆಳಂದ| ರಿಷಭ್ ಶೆಟ್ಟಿಗೆ ‘ಸಿದ್ಧಶ್ರೀ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಜಿಡಗಾ ನವಕಲ್ಯಾಣ ಮಠದಲ್ಲಿ ಶುಕ್ರವಾರ ಮುಗಳಖೋಡ–ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರ 38ನೇ ಗುರುವಂದನ ಸಮಾರಂಭದಲ್ಲಿ ಚಲನಚಿತ್ರ ನಟ ರಿಷಭ್‌ ಶೆಟ್ಟಿ ಅವರಿಗೆ ಮಠದ ವತಿ ಯಿಂದ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಜತೆ ₹ 1 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನದ ಪದಕ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮುರುಘರಾಜೇಂದ್ರ ಸ್ವಾಮೀಜಿ, ‘ಜಿಡಗಾ ಮಠವು ಭಕ್ತರ ಮಠವಾಗಿದೆ. ಲಿಂ.ಸಿದ್ಧರಾಮ ಶಿವಯೋಗಿಗಳು ಇಂದಿಗೂ ಭಕ್ತರ ಹೃದಯದಲ್ಲಿದ್ದಾರೆ. ಸೌಹಾರ್ದತೆಯ ಪರಂಪರೆಯು ಜಿಡಗಾ ಮಠದ ಹೆಮ್ಮೆಯಾಗಿದೆ.  ಅನ್ನ
ದಾಸೋಹ, ಜ್ಞಾನದಾಸೋಹ ಜೊತೆಗೆ ಮಠವು ಕೆರೆ ನಿರ್ಮಾಣ, ಆಸ್ಪತ್ರೆ ಮತ್ತಿತರ ಲೋಕಕಲ್ಯಾಣ ಕಾರ್ಯ ಕೈಗೊಳ್ಳುವ ಸಂಕಲ್ಪ ತಾಳಿದೆ’ ಎಂದು ಹೇಳಿದರು.

ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ದೈವದ ಶಕ್ತಿಯನ್ನು ಸಾರುವ ಚಿತ್ರವಾಗಿದೆ. ದೇಶ, ವಿದೇಶದಲ್ಲಿಯೂ ಕಾಂತಾರ ಯಶಸ್ಸು ಪಡೆಯಲು ದೈವದ ಬಲವಿದೆ. ದೈವಿ ವ್ಯಕ್ತಿತ್ವದ ರಿಷಭ್‌ ಶೆಟ್ಟಿಗೆ ಈ ಬಾರಿ ಸಿದ್ಧಶ್ರೀ ಪ್ರಶಸ್ತಿ ನೀಡುತ್ತಿರುವುದು ಭಕ್ತರಿಗೆ ಸಂತಸ ತಂದಿದೆ ಎಂದರು.

ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು, ಹಾರಕೂಡನ ಡಾ.ಚನ್ನವೀರ ಶಿವಚಾರ್ಯರು, ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಚಿಣಮಗೇರಿಯ ವೀರಮಹಾಂತ ಸ್ವಾಮೀಜಿ, ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ದಾಕ್ಷಾಯಣಿ ಎಸ್. ಅವ್ವ, ಆಳಂದದ ಸಿದ್ದೇಶ್ವರ ಸ್ವಾಮೀಜಿ,
ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ ಗುತ್ತೇದಾರ, ಎಂ.ವೈ. ಪಾಟೀಲ, ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ದೊಡ್ಡಪ್ಪಗೌಡ ಪಾಟೀಲ, ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ನಿತಿನ್ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಸಿದ್ದರಾಮ ಪ್ಯಾಟಿ, ಗುರುಶರಣ ಪಾಟೀಲ, ರೇವಣಸಿದ್ದಪ್ಪ ನಾಗೂರೆ ಇದ್ದರು.

ಖ್ಯಾತ ಗಾಯಕ ವಿಜಯ್ ಪ್ರಕಾಶ್‌ ಅವರ ತಂಡದಿಂದ ಸಂಗೀತ ಕಾರ್ಯಕ್ರಮವು ಗುರುವಂದನ ಸಮಾರಂಭಕ್ಕೆ ಕಳೆ ಕಟ್ಟಿತು. ಯಕ್ಷಗಾನ ಕಲಾವಿದರ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ನಿರೂಪಕಿ ಅನುಶ್ರೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.

ಆಳಂದ, ಅಕ್ಕಲಕೋಟ, ಕಲಬುರಗಿ, ಅಫಜಲಪುರ, ‌ಬೆಳಗಾವಿ, ರಾಯಚೂರು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಲು ಬಂದಿದ್ದರು.

ಈ ಮೊದಲು ಬೆಳಗ್ಗೆ ಲಿಂ.ಸಿದ್ಧರಾಮ ಶಿವಯೋಗಿಗಳ ಕರ್ತ್ಯು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಆಸ್ಪತ್ರೆ, ಕಲಬುರಗಿ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ನೂರಕ್ಕೂ ಅಧಿಕ ಭಕ್ತರು ರಕ್ತದಾನ ಮಾಡಿದರು. ನೂರಾರು ಸಸಿ ನಡೆವು ಕಾರ್ಯಕ್ರಮವು ಮಠದ ಭಕ್ತರಿಂದ ನಡೆಯಿತು. ದಿನವಿಡೀ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು