ತೊಗರಿ ಸಂಗ್ರಹಕ್ಕೆ ಅತ್ಯಾಧುನಿಕ ಕಣಜ

ಕಲಬುರಗಿ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಒಂದು ಲಕ್ಷ ಕ್ವಿಂಟಲ್‌ನಷ್ಟು ತೊಗರಿ ಸಂಗ್ರಹ ಮಾಡಬಲ್ಲ ಅತ್ಯಾಧುನಿಕ ‘ಕಣಜ’ ನಿರ್ಮಿಸಲಾಗಿದೆ. ರೈತರು ಇನ್ನು ಮುಂದೆ ತಮ್ಮ ತೊಗರಿ ಉತ್ಪನ್ನ ಸಂಗ್ರಹ ಮಾಡಿಡಲು ಪರದಾಡಬೇಕಿಲ್ಲ.
ಕೇಂದ್ರ ಸರ್ಕಾರದ ಕೃಷಿ ಮಾರಾಟ ಇಲಾಖೆಯ ಅನುದಾನದಲ್ಲಿ, ವಿಶೇಷ ಅಭಿವೃದ್ಧಿ ಯೋಜನೆ ಅಡಿ ₹ 2.2 ಕೋಟಿ ವೆಚ್ಚ ಮಾಡಿ ಇದನ್ನು ನಿರ್ಮಿಸಲಾಗಿದೆ.
ಒಂದೇ ಜಾಗದಲ್ಲಿ 55 ಅಡಿ ಎತ್ತರದ ಐದು ಬೃಹತ್ ಕಣಜಗಳನ್ನು ನಿರ್ಮಿಸಿದ್ದು, ತಲಾ 200 ಮೆಟ್ರಿಕ್ ಟನ್ ತೊಗರಿ ಸಂಗ್ರಹ ಸಾಮರ್ಥ್ಯ ಹೊಂದಿವೆ. ತೊಗರಿ ಸಂಸ್ಕರಣೆ, ತೂಕ, ಚೀಲಗಳ ಭರ್ತಿ, ಗುಣಮಟ್ಟ ಮಾಪನ, ಕೀಟನಾಶಕ ಲೇಪನ ಹೀಗೆ ಎಲ್ಲ ಕೆಲಸಗಳನ್ನೂ ಒಂದೇ ಸ್ಥಳಗದಲ್ಲಿ ಮಾಡಬಲ್ಲ ಕೌಶಲವನ್ನು ಈ ಎಲೆಕ್ಟ್ರಾನಿಕ್ ಕಣಜ ಹೊಂದಿದೆ.
ಏನಿದರ ವಿಶೇಷ?
ಕೃಷಿ ಕಣಜವು ಪುರಾತನ ಭಾರತೀಯರ ಪ್ರಯೋಗ. ಬಿದಿರು, ದಂಟು, ಮಣ್ಣಿನ ಗೋಡೆಗಳನ್ನು ಕಟ್ಟಿ ಅದರಲ್ಲಿ ಧಾನ್ಯ ಸಂಗ್ರಹಿಸಿ ಇಡುವ ಪದ್ಧತಿ ಹಿಂದೆ ಇತ್ತು. ಇದೇ ಮಾದರಿಯನ್ನು ಅನುಸರಿಸಿ ಆಧುನಿಕ ತಂತ್ರಜ್ಞಾನ ಬಳಸಿ ಈ ಹೊಸ ಕಣಜಗಳನ್ನು ಸಿದ್ಧಪಡಿಸಲಾಗಿದೆ. ಐದು ಬಹೃತ್ ಗುಮ್ಮಿಗಳನ್ನು ಒಂದೇ ಜಾಗದಲ್ಲಿ ನಿರ್ಮಿಸಿದ್ದು, ಎಲ್ಲಕ್ಕೂ ತೊಗರಿ ಸಂಸ್ಕರಣ ಘಟಕದ ಸಂಪರ್ಕ ಕಲ್ಪಿಸಲಾಗಿದೆ.
ರೈತರು ತರುವ ತೊಗರಿ ಚೀಲಗಳನ್ನು ಮೊದಲು ಗೋದಾಮಿನಲ್ಲಿರುವ ಡಿ–ಬ್ಲಾಗಿಂಗ್ ಯೂನಿಟ್‌ನಲ್ಲಿ ಸುರಿಯಲಾಗುತ್ತದೆ. ಅಲ್ಲಿಂದ ಯಂತ್ರದ ಸಹಾಯದಿಂದ ಮುಂದಕ್ಕೆ ಹೋಗುವ ತೊಗರಿ ‘ಬಕೆಟ್ ಎಲಿವೇಟರ್’ ಎಂಬ ಬುಟ್ಟಿಯಾಕಾರದ ಯಂತ್ರದಲ್ಲಿ ಸಂಸ್ಕರಣಗೊಳ್ಳುತ್ತದೆ. ಇಲ್ಲಿಂದ ‘ಕ್ಲೀನಿಂಗ್ ಯೂನಿಟ್’ಗೆ ಸಾಗಿ ಸ್ವಚ್ಛವಾದ ತೊಗರಿಯು ನೇರವಾಗಿ ಕಣಜ ಸೇರುತ್ತದೆ. ಸಂಸ್ಕರಣದಿಂದ ಬಂದ ವ್ಯರ್ಥ ಪದಾರ್ಥವು ಇನ್ನೊಂದೆಡೆ ಸಂಗ್ರಹವಾಗುತ್ತದೆ. ಇಲ್ಲಿಗೆ ಈ ಕಣಜದ ಒಂದು ಪ್ರಯೋಗ ಮುಗಿದ ಹಾಗೆ.
ಇದರ ಪಕ್ಕದಲ್ಲೇ ಖರೀದಿ ಮಾಡುವುದಕ್ಕೂ ಅವಕಾಶವಿದೆ. ಸಂಗ್ರಹಗಾರದ ಪಕ್ಕದಲ್ಲೇ ‘ಔಟ್‌ಪುಟ್’ ಯೂನಿಟ್ ಇದೆ. ಈಗಾಗಲೇ ಕಣಜದಲ್ಲಿ ಸಂಗ್ರಹಗೊಂಡ ತೊಗರಿಯು ಒಂದು ನಳಿಕೆಯ ಮೂಲಕ ನೇರವಾಗಿ ಚೀಲದೊಳಗೆ ಬಂದು ಬೀಳುತ್ತದೆ. ಇದರ ಪಕ್ಕದಲ್ಲೇ ತೂಕದ ಯಂತ್ರವಿದೆ.
ಈ ಬೃಹತ್ ಯಂತ್ರದ ನಿರ್ವಹಣೆ ಮಾಡಲು ಇಬ್ಬರು ತಂತ್ರಜ್ಞರು ಸಾಕು. ಆದರೆ, ತೊಗರಿ ಲೋಡಿಂಗ್, ಅನ್‌ಲೋಡಿಂಗ್ ಘಟಕಗಳಲ್ಲಿ ಹಮಾಲರು ಹಾಗೂ ರೈತರಿಗೆ ಇರುವ ಕೆಲಸ ಇದ್ದೇ ಇರುತ್ತದೆ.
ಬೆಂಗಳೂರಿನ ರಾಘವೇಂದ್ರ ಎಂಜಿನಿಯರಿಂಗ್ ಸಿಸ್ಟಮ್ ಪ್ರೈ.ಲಿ. ಕಂಪನಿಯ ಈ ಕಣಜ ನಿರ್ಮಿಸಿದೆ.
ಹೇಗೆ ಉಪಯುಕ್ತ?
ಕಲಬುರಗಿ ಎಪಿಎಂಸಿಗೆ ಪ್ರತಿ ದಿನ ಸಾವಿರ ಕ್ವಿಂಟಲ್‌ಗೂ ಹೆಚ್ಚು ತೊಗರಿ ಬರುತ್ತದೆ. ಇದರ ಸಂಗ್ರಹಕ್ಕೆ ಈಗಾಗಲೇ ನಾಲ್ಕು ಬೃಹತ್ ಸಂಗ್ರಹಗಾರಗಳನ್ನು ನಿರ್ಮಿಸಲಾಗಿದೆ. ಆದರೂ ಜಾಗ ಸಾಲದೇ ರೈತರು ತುಂಬಿಕೊಂಡು ಬಂದ ಲಾರಿ, ಟ್ರ್ಯಾಕ್ಟರ್‌ಗಳನ್ನೇ ವಾರಗಟ್ಟಲೇ ನಿಲ್ಲಿಸಬೇಕಾಗಿದೆ. ಇದರಿಂದ ವಾಹನದ ಬಾಡಿಗೆ ಜತೆಗೆ ತೊಗರಿಯ ಗುಣಮಟ್ಟವೂ ಕುಸಿಯುವ ಸಾಧ್ಯತೆ ಇರುತ್ತದೆ.
ಪ್ರಾಂಗಣದಲ್ಲಿ ಸಂಗ್ರಹಿಸಿಟ್ಟ ತೊಗರಿಗೆ ಇಲಿ, ಹೆಗ್ಗಣಗಳ ಕಾಟ, ಕೀಟಗಳಿಂದಲೂ ರಕ್ಷಿಸಬೇಕಾದ ಸವಾಲಿದೆ. ಮೇಲಾಗಿ, ಮಳೆಗಾಲದಲ್ಲಿ ತೇವಾಂಶ ಹೆಚ್ಚಾದರೆ ದರ ಕುಸಿಯುವ ಜತೆಗೆ, ತೊಗರಿಗೆ ಬೂಸರು ಬರುವ ಸಾಧ್ಯತೆಯೂ ಇರುತ್ತದೆ.
ಸದ್ಯ ನಿರ್ಮಿಸಿರುವ ಆಧುನಿಕ ಕಣದಲ್ಲಿ ಏಕಕಾಲಕ್ಕೆ ಒಂದು ಲಕ್ಷ ಟನ್‌ನಷ್ಟು ತೊಗರಿಯನ್ನು ಸಂಗ್ರಹಿಸಿ ಇಡಬಹುದು. ಇದಕ್ಕೆ ಕಾಲಮಿತಿಯೂ ಇಲ್ಲ. ಮಳೆ, ಬಿಸಿಲು, ತೇವಾಂಶ ಹೀಗೆ ಪರಿಸರದಲ್ಲಿ ಯಾವುದೇ ವ್ಯತ್ಯಾಸವಾದರೂ ತೊಗರಿ ಗುಣಮಟ್ಟದಲ್ಲಿ ಏರುಪೇರಾಗದಂಥ ತಂತ್ರಜ್ಞಾನ ಇದರಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.