ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾ.4ರಂದು ಎಸ್‌ಯುಸಿಐ ಪ್ರತಿಭಟನೆ'

Last Updated 1 ಮಾರ್ಚ್ 2021, 7:26 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ‌ಮಾಡಿದ್ದನ್ನು ಖಂಡಿಸಿ ಮಾರ್ಚ್ 4ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಸೆಕ್ರೆಟೇರಿಯೆಟ್ ಸದಸ್ಯ ಎಚ್.ವಿ.ದಿವಾಕರ ತಿಳಿಸಿದರು.

ನಗರದಲ್ಲಿ ‌ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಛೆ ದಿನ್ ತರುವುದಾಗಿ ಅಧಿಕಾರಕ್ಕೆ ಬಂದ ನರೇಂದ್ರ ‌ಮೋದಿ ನೇತೃತ್ವದ ಕೇಂದ್ರ ‌ಬಿಜೆಪಿ ಸರ್ಕಾರವು ಜನರ ಮೇಲೆ ಅನಗತ್ಯ ಬೆಲೆ ಏರಿಕೆ ಹೊರೆಯನ್ನು ‌ಹೊರಿಸಿದೆ. ನಿರಂತರವಾಗಿ ‌ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದ್ದರಿಂದ ಮಧ್ಯಮ ವರ್ಗದವರು, ಬಡವರು ದಿನ ದೂಡುವುದೇ ಕಷ್ಟವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡುತ್ತಿದೆ. ನೋಟ್ ಬ್ಯಾನ್, ಲಾಕ್ ಡೌನ್ ನಿಂದಾಗಿ ‌ಜನರು ತತ್ತರಿಸಿದ ಸಂದರ್ಭದಲ್ಲಿಯೂ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ ಅದಾನಿ ಅವರ ಆಸ್ತಿ ಸಾಕಷ್ಟು ಹೆಚ್ಚಾಗಿದೆ. ಅದಾನಿ ನಿತ್ಯ ‌₹ 12 ಕೋಟಿ ಗಳಿಸುತ್ತಿದ್ದಾರೆ ಎಂದು ಟೀಕಿಸಿದರು.

ಸರ್ಕಾರಿ ಸ್ವಾಮ್ಯದ ‌ಲಾಭದಾಯಕ ಉದ್ಯಮಗಳನ್ನು ತಮ್ಮ ಕಾರ್ಪೊರೇಟ್ ಗೆಳೆಯರಿಗೆ ಮೋದಿ ಅವರು ಅಗ್ಗದ ಬೆಲೆಗೆ ಹಸ್ತಾಂತರಿಸುತ್ತಿದ್ದಾರೆ. ಇದನ್ನು ಖಂಡಿಸಿ ಎಸ್ ಯುಸಿಐ ಕಮ್ಯುನಿಸ್ಟ್ ‌ಪಕ್ಷವು ಮಾರ್ಚ್ 4ರಿಂದ 10ರವರೆಗೆ ರಾಜ್ಯದ ‌ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. 4ರಂದು‌ ನಗರದ ಸರ್ದಾರ್ ಪಟೇಲ್ ವೃತ್ತದಿಂದ ‌ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಮಾ 19ರಂದು ರಾಜ್ಯಮಟ್ಟದಲ್ಲಿ ವಿಧಾನಸೌಧ ಚಲೊ ಹಮ್ಮಿಕೊಳ್ಳಲಾಗಿದೆ ‌ಎಂದರು.

ಚುನಾವಣೆಯಲ್ಲಿ ‌ಸ್ಪರ್ಧೆ: ಪಕ್ಷವು ಚುನಾವಣೆಗಳನ್ನು ಹೋರಾಟದ ಭಾಗವೆಂದೇ ಪರಿಗಣಿಸುತ್ತದೆ. ಆದ್ದರಿಂದ ಪಶ್ಚಿಮ ‌ಬಂಗಾಳ ಹಾಗೂ ಕೇರಳ ವಿಧಾ‌ನಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ದಿವಾಕರ ತಿಳಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಎಂ. ಶರ್ಮಾ, ಮಹೇಶ ಎಸ್.ಬಿ. ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT