ಕಲಬುರ್ಗಿ: ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಚುರುಕು

ಭಾನುವಾರ, ಜೂಲೈ 21, 2019
28 °C
ಬೀಜ ವಿತರಣೆಗೆ ಕೃಷಿ ಇಲಾಖೆ ಸಜ್ಜು; 9 ಸಾವಿರ ಕ್ವಿಂಟಲ್‌ ಬೀಜ ದಾಸ್ತಾನು

ಕಲಬುರ್ಗಿ: ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಚುರುಕು

Published:
Updated:
Prajavani

ಕಲಬುರ್ಗಿ: ಈಚೆಗೆ ಸುರಿದ ವ್ಯಾಪಕ ಕಳೆಯಿಂದಾಗಿ ಜಿಲ್ಲೆಯ ರೈತಾಪಿ ಜನ ಹರ್ಷಗೊಂಡಿದ್ದು, ಮುಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೆಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆ ಬಿದ್ದಿದೆ. ಕೆಲವೆಡೆ ಅಧಿಕ ಮಳೆಯಾಗಿದೆ.

ಜಿಲ್ಲೆಯಲ್ಲಿರುವ ಎಲ್ಲ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಇಲಾಖೆ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಿಸುತ್ತಿದೆ. ಆಳಂದ ರೈತ ಸಂಪರ್ಕ ಕೇಂದ್ರದಲ್ಲಿ ದಟ್ಟಣೆ ಕಂಡು ಬಂದಿದ್ದು, ಅಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ರೈತರಿಗೆ ಸಕಾಲಕ್ಕೆ ಬೀಜ ವಿತರಿಸಲಾಗುತ್ತಿದೆ.

ತೊಗರಿ, ಉದ್ದು ಬಿತ್ತನೆ: ಜಿಲ್ಲೆಯ ಬಹುತೇಕ ರೈತರಿಗೆ ನೀರಾವರಿ ಸೌಲಭ್ಯವಿಲ್ಲ. ಒಣಬೇಸಾಯ ಪದ್ಧತಿಯನ್ನೇ ನೆಚ್ಚಿಕೊಂಡಿದ್ದು ಮುಂಗಾರು ಮಳೆ ಸುರಿದ ಬಳಿಕ ತೊಗರಿ, ಉದ್ದು ಹಾಗೂ ಸೋಯಾ ಬೆಳೆಯಲು ಮುಂದಾಗಿದ್ದಾರೆ. ವಾರದ ಹಿಂದೆಯೇ ಹೊಲವನ್ನು ಹಸನು ಮಾಡಿದ ರೈತರು ಮಳೆಗಾಗಿ ಕಾಯುತ್ತಿದ್ದರು. ಶುಕ್ರವಾರ ಹಾಗೂ ಶನಿವಾರ ವ್ಯಾಪಕವಾಗಿ ಮಳೆ ಸುರಿದಿದ್ದು, ಎತ್ತುಗಳನ್ನು ಹೂಡಿ ಬಿತ್ತನೆ ಮಾಡುತ್ತಿದ್ದಾರೆ.

ಅಫಜಲಪುರ, ಆಳಂದ ಹಾಗೂ ಜೇವರ್ಗಿ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ಉಳಿದ ಕಲಬುರ್ಗಿ, ಜೇವರ್ಗಿ, ಚಿತ್ತಾಪುರ ಹಾಗೂ ಚಿಂಚೋಳಿ ತಾಲ್ಲೂಕುಗಳಲ್ಲಿ ಕಡಿಮೆ ಮಳೆ ಬಿದ್ದಿದೆ. ಜಿಲ್ಲೆಯ ಬಹುತೇಕ ಕಡೆ ಬಿತ್ತನೆ ಆರಂಭವಾಗಿದೆ. ಇನ್ನೊಂದು ಮಳೆ ಬಿದ್ದರೆ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರ.

ಗೊಬ್ಬರಕ್ಕೂ ಕೊರತೆ ಇಲ್ಲ: ಜಿಲ್ಲೆಯ ರೈತರಿಗೆ ವಿತರಿಸಲು 26 ಸಾವಿರ ಮೆಟ್ರಿಕ್‌ ಟನ್‌ ಡಿಎಪಿ ಗೊಬ್ಬರ ಸೇರಿದಂತೆ 40 ಸಾವಿರ ಮೆಟ್ರಿಕ್ ಟನ್‌ ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳು ಹಾಗೂ ಇಲಾಖೆಯ ಗೋದಾಮುಗಳಲ್ಲಿ ಇರಿಸಲಾಗಿದೆ. ದಾಸ್ತಾನು ಮುಗಿದ ಕೂಡಲೇ ಹೆಚ್ಚುವರಿಯಾಗಿ ಇರಿಸಲಾದ 5 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಗುರ ಹೇಳಿದರು.

‘ಜೂನ್‌ 24ರವರೆಗೆ ಜಿಲ್ಲೆಯಲ್ಲಿ 86 ಮಿಲಿ ಮೀಟರ್‌ ಮಳೆ ಸುರಿದಿದೆ. ವಾಡಿಕೆಯಂತೆ 87 ಎಂ.ಎಂ. ಮಳೆ ಬರಬೇಕಿತ್ತು. ಬೀಜ, ಗೊಬ್ಬರ ಪೂರೈಕೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದರು.‌

‘ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, 15 ದಿನಗಳವರೆಗೆ ಬಿತ್ತನೆ ಕಾರ್ಯಕ್ಕೆ ಆಳುಗಳು ಸಿಗುವುದೇ ದುರ್ಲಭವಾಗಿದೆ’ ಎಂದು ನಗರದ ಹೊರವಲಯದ ಆಳಂದ ರಸ್ತೆಯಲ್ಲಿ 18 ಎಕರೆ ಜಮೀನು ಹೊಂದಿರುವ ರೈತ ಬಸವರಾಜ ಗೌಳಿ ಹೇಳಿದರು.

*
ವಾರದ ಹಿಂದೆಯೇ ಬಿತ್ತನೆ ಶುರು ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಮಳೆ ಆಗಿರಲಿಲ್ಲ. ಶುಕ್ರವಾರ ಮಳೆಯಾಗಿದ್ದರಿಂದ ಈಗ ಉದ್ದು ಬಿತ್ತನೆ ನಡೆದಿದೆ. ಎರಡು ದಿನ ಬಿಟ್ಟು ತೊಗರಿ ಬಿತ್ತನೆ ಶುರು ಮಾಡುತ್ತೇವೆ.
-ಬಸವರಾಜ ಗೌಳಿ, ರೈತ, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !