ಬುಧವಾರ, ಮಾರ್ಚ್ 29, 2023
27 °C
ಒಂದು ವಾರ ಮುಂಚಿನಿಂದಲೂ ಬಗೆಬಗೆಯ ಸಿಹಿ ತಿಂಡಿಗಳನ್ನು ಸಿದ್ಧಪಡಿಸಿದ್ದಾರೆ ಗೃಹಿಣಿಯರು

ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿಗೆ ಭರಪೂರ ಖಾದ್ಯ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಎರಡು ವರ್ಷಗಳ ನಂತರ ಸಂಭ್ರಮ ತಂದಿರುವ ದೀಪಾವಳಿಗೆ ಭರ್ಜರಿ ಸಿಹಿಖಾದ್ಯಗಳು ಈಗಾಗಲೇ ಸಿದ್ಧಗೊಂಡಿವೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ದೀಪಾವಳಿ ಎಂದರೆ ಮೊದಲು ನೆನಪಾಗುವುದೇ ಸಿಹಿ ತಿನಿಸುಗಳ ಪಟ್ಟಿ. ಶಂಕರಪೋಳಿ, ಶಾವಿಗೆ ಪಾಯಸ, ಹೋಳಿಗೆ, ಬೇಸನ್‌ ಚಕ್ಕಿ, ವೈವಿಧ್ಯಮಯ ಲಡ್ಡು, ಕೋಡುಬಳೆ, ಚೆಕ್ಕುಲಿ, ಶೇಂಗಾ ಹೋಳಿಗೆ, ಜಾಮೂನು, ಕೊಬ್ಬರಿ ಉಂಡೆ, ಕರ್ಚಿಕಾಯಿ, ಕಡಬು, ಗಿಲಗಂಚಿ, ಗಾಟೆ, ಹಪ್ಪಳ... ಒಂದೇ ಎರಡೇ; ಭರ್ಜರಿ ಖಾದ್ಯಗಳ ಹೆಸರು ಕೇಳಿದರೆ ನಾಲಿಗೆ ಚಪ್ಪರಿಸುತ್ತದೆ. ಒಂದೊಂದು ಸಿಹಿಯನ್ನು ಒಂದೊಂದು ದಿನ ಪ್ರತ್ಯೇಕವಾಗಿ ಮಾಡುವುದೇ ಈ ಭಾಗದ ವೈಶಿಷ್ಟ್ಯ.

ಗೃಹಿಣಿಯರು ವಾರದ ಹಿಂದಿನಿಂದಲೇ ಹಬ್ಬದ ಭೋಜನಕ್ಕೆ ಏನೇನು ಸಿದ್ಧಪಡಿಸಬೇಕು ಎಂಬ ತಯಾರಿ ಮಾಡಿಕೊಂಡಿದ್ದಾರೆ. ಉಂಡೆ, ಚೂಡಾ, ಶಂಕರಪೋಳಿಯಂಥ ಪದಾರ್ಥಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ. ಕುಟುಂಬದಲ್ಲಿ ಮಕ್ಕಳು, ಪುರುಷರು, ಹಿರಿಯರಿಗೆ ಇಷ್ಟವಾಗುವಂಥ ತಹರೇವಾರು ಖಾದ್ಯಗಳು ಈಗಾಗಲೇ ಘಮಘಮಿಸುತ್ತಿವೆ.

ಯಾವ್ಯಾವ ತಿಂಡಿ

ದೀಪಾವಳಿಯ ಎಲ್ಲ ಸಡಗರಗಳಲ್ಲೂ ಬಲಿಪಾಡ್ಯಮಿಗೆ ಪ್ರಧಾನ ಸ್ಥಾನವಿದೆ. ಆದರೆ, ಇದಕ್ಕೆ ಮುನ್ನುಡಿ ಬರೆಯುವುದು ‘ನೀರು ತುಂಬುವ ಹಬ್ಬ’.  ಇದನ್ನು ವೇದಕಾಲದಲ್ಲಿ ‘ಮಾಸ ಶಿವರಾತ್ರಿ’ ಎಂದೂ ಕರೆದಿದ್ದಾರೆ. ಮನೆಯ ಪಾತ್ರೆಗಳನ್ನೆಲ್ಲ ಖಾಲಿ ಮಾಡಿ ಹೊಸಾಗಿ ನೀರು ತುಂಬುವುದು ಅಂದಿನ ವಿಶೇಷ. ಹೊಸ ಕೊಡ, ಚೊಂಬುಗಳಲ್ಲಿ ‘ಗಂಗೆ’ಯನ್ನು ತುಂಬಿ ಪೂಜೆ ಮಾಡುತ್ತಾರೆ. ಈ ದಿನದ ವಿಶೇಷ ತಿಂಡಿಗಳಲ್ಲಿ ಕರಿದ ಹಾಗೂ ಖಾರದ ಪದಾರ್ಥಗಳೇ ಹೆಚ್ಚು. ವಡೆ, ಚಕ್ಕುಲಿ, ಶಂಕರಪೋಳಿ, ಚೂಡಾ ಸವಿಯುವುದು ಅಂದಿನ ವಿಶೇಷ.‌

ಎರಡನೇ ದಿನ ನರಕ ಚತುರ್ದಶಿ. ಧನಲಕ್ಷ್ಮಿ ಪೂಜೆ ಈ ದಿನದ ವಿಶೇಷ. ಮನೆಯ ಸದಸ್ಯರೆಲ್ಲ ಎಣ್ಣೆಮಜ್ಜನ ಮಾಡಿ, ಮಕ್ಕಳು, ಹಿರಿಯರಿಗೆ ಕಂಕಣ ಕಟ್ಟಿ ಆರತಿ ಬೆಳಗುವುದು ವಾಡಿಕೆ. ಮಧ್ಯಾಹ್ನದ ಹೊತ್ತಿಗೆ ಶ್ಯಾವಿಗೆ ಪಾಯಸ– ಹಾಲಿನ ಸವಿರುಚಿ ಭೋಜನ. ಮೂರನೇ ದಿನ ‘ಬಲೀಂದ್ರ ಪೂಜೆ’. ಇದು ಅಮಾವಾಸ್ಯೆಯ ವಿಶೇಷ. ಈ ದಿನದಿಂದಲೇ ವಿಕ್ರಮ ಸಂವತ್ಸರ ಆರಂಭವಾಗುತ್ತದೆ. ವರ್ತಕರು, ಉದ್ಯಮಿಗಳಿಗೆ ಈ ದಿನ ಅತ್ಯಂತ ಶ್ರೇಷ್ಠವಾದುದು. ಹಾಗಾಗಿ, ವ್ಯಾಪಾರದ ಪ್ರತಿಯೊಂದು ವಸ್ತುವನ್ನೂ ಪೂಜೆ ಮಾಡುವುದು ಸಂಪ್ರದಾಯ. ಹಳ್ಳಿಗಳಲ್ಲಿ ‘ಕರಿ ಹರಿಯುವ ದಿನ’ ಆಚರಿಸಿದ ಬಳಿಕ ಬಿಸಿಬಿಸಿ ಹೋಳಿಗೆ ಸವಿಯುವ ಸಂಭ್ರಮ.

ನಾಲ್ಕನೇ ದಿನ ದೀಪಾವಳಿಯ ಮುಖ್ಯ ಹಬ್ಬ ‘ಬಲಿಪಾಡ್ಯಮಿ’. ಮನೆ– ಮನಗಳಲ್ಲಿನ ಅಂಧಕಾರ ದೂರಾಗಿ ಬೆಳಗು ಹರಿಯಲಿ ಎಂಬ ಕಾರಣಕ್ಕೆ ದೀಪಾವಳಿ ಆಚರಿಸಲಾಗುತ್ತದೆ. ಹಬ್ಬದ ದಿನ ಬಹುಪಾಲು ಎಲ್ಲ ಸಿಹಿತಿಂಡಿಗಳನ್ನೂ ಸವಿಯುವುದೇ ಸಂಭ್ರಮ.‌

‌ಎಲ್ಲರೂ ಒಂದಾಗಿ ಬನ್ನಿ

ಎರಡು ವರ್ಷಗಳಿಂದ ಕೊರೊನಾ ಉಪ‍ಟಳ ಹೆಚ್ಚಾಗಿತ್ತು. ಅಂತರ ಕಾಪಾಡಿಕೊಳ್ಳುವ ಕಾರಣಕ್ಕೆ ಯಾರು ಯಾರೊಂದಿಗೂ ಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ. ಈ ವರ್ಷ ಮಾರ್ಗಸೂಚಿಗಳಲ್ಲಿಯೂ ಹಲವು ಸಡಿಲಿಕೆ ಮಾಡಲಾಗಿದೆ. ಹೀಗಾಗಿ, ಪುರುಷರು, ಮಹಿಳೆಯರು, ಉದ್ಯಮಿಗಳು, ರೈತರು ಸಾಮೂಹಿಕವಾಗಿ ಹಬ್ಬ ಆಚರಿಸುವ ಉಮೇದಿನಲ್ಲಿದ್ದಾರೆ.

 *

ಹಬ್ಬದ ಬಗ್ಗೆ ಮಾತಾಡಿ...

ನೀರು ತುಂಬುವ ಸಂಪ್ರದಾಯ ಕಲ್ಯಾಣ ಕರ್ನಾಟಕದಲ್ಲಿ ಬಹಳ ವಿಶೇಷ. ಹರಿಯುವ ನೀರು ಅಥವಾ ಬೋರ್‌ವೆಲ್‌ನಿಂದ ಬಿಂದಿಗೆಯಲ್ಲಿ ನೀರು ತಂದು, ಅದಕ್ಕೆ ಪೂಜೆ ಮಾಡಿ, ಕಳಶ ಇಟ್ಟು ಆರತಿ ಬೆಳಗಲಾಗುತ್ತದೆ. ಇದು ಗಂಗೆ‍ಪೂಜೆ ಎಂದು ವೇದ ಕಾಲದಿಂದ ಹೇಳಿಕೊಂಡು ಬರಲಾಗಿದೆ. ನಮ್ಮ ಮನೆಯಲ್ಲಿಯೂ ಗಂಗೆಪೂಜೆಯ ದಿನ ಇಡೀ ಕುಟುಂಬ ಸೇರಿ ಊಟ ಮಾಡುತ್ತೇವೆ.

- ವಿದ್ಯಾ ಕುಲಕರ್ಣಿ, ಉಪನ್ಯಾಸಕಿ

***
ಬಾಳಿನಲ್ಲಿ ಬೆಳಕು ನೀಡುವುದೇ ದೀಪಾವಳಿ ಹಬ್ಬದ ಸಂದೇಶ. ಹಬ್ಬಗಳು ಬರುವುದೇ ಸಂಭ್ರಮಕ್ಕಾಗಿ. ಅದರಲ್ಲೂ ಹಬ್ಬದ ಅಡುಗೆ ಉಣ್ಣುವುದಕ್ಕಿಂತ ಮಾಡುವುದರಲ್ಲೇ ಒಂದು ರೀತಿಯ ಖುಷಿ ನಮಗೆ. ಈಗಾಗಲೇ ಶಂಕರಪೋಳಿ, ಕರ್ಚಿಕಾಯಿ, ಉಂಡಿಗಳನ್ನು ಸಿದ್ಧಪಡಿಸಿದ್ದೇನೆ. ಬಂಧು– ಮಿತ್ರರೆಲ್ಲ ಸೇರಿ ಈ ಬಾರಿ ಸಂಭ್ರಮಿಸಲಿದ್ದೇವೆ.

- ರೋಹಿಣಿ ಶಿಂಧೆ, ಉಪನ್ಯಾಸಕಿ‌

***

ವ್ಯಾಪಾರಸ್ಥರ ಕುಟುಂಬದಲ್ಲಿ ದೀಪಾವಳಿಗೆ ಹೆಚ್ಚು ಮಹತ್ವವಿದೆ. ಲಕ್ಷ್ಮಿ ಪೂಜೆ ಮಾಡಿ ಪ್ರತಿವರ್ಷವೂ ಲಾಭ ಬರಲಿ ಎಂಬ ಪ್ರಾರ್ಥನೆ ಮಾಡುತ್ತೇವೆ. ನಮ್ಮ ಕುಟುಂಬದ ಎಲ್ಲ ಸದಸ್ಯರು, ಸ್ನೇಹಿತರೆಲ್ಲ ಸೇರಿ ಪೂಜೆ ಮಾಡಿ ಬಗೆಬಗೆಯ ಭೋಜನ ಮಾಡುವುದು ರೂಢಿ. 

–ಈಶ್ವರಿ ಮೈಲಾಪುರ, ಪದವಿ ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು