ಬುಧವಾರ, ಮಾರ್ಚ್ 29, 2023
32 °C

ಮನ, ಮನೆಗಳಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ; ಗೋವಿನ ಸಗಣಿಯಲ್ಲೂ ಅರಳಿದ ಹಣತೆ

ರಾಮಮೂರ್ತಿ ಪಿ. Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಗೋಮಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಹಲವು ಗೋಶಾಲೆಗಳು ಬೆಳಕಿನ ಹಬ್ಬ ದೀಪಾವಳಿಗೆ ಗೋವಿನ ಸಗಣಿಯಿಂದ ತಯಾರಾದ ಹಣತೆಗಳನ್ನು ಪರಿಚಯಿಸಿವೆ.

ನಗರ ಹೊರವಲಯದ ಕುಸನೂರಿನ ಮಾಧವ ಗೋಶಾಲೆ ಹಾಗೂ ಸೈಯದ್ ಚಿಂಚೋಳಿ ಸಮೀಪದ ಪಯೋನಿಧಿ ಗೋಧಾಮಗಳಲ್ಲಿ ಗೋವಿನ ಸಗಣಿ ಬಳಸಿ ಹಣತೆಗಳನ್ನು ತಯಾರಿಸಲಾಗಿದೆ. ನಗರ ಸೇರಿ ಜಿಲ್ಲೆಯ ವಿವಿಧೆಡೆ ಈ ಹಣತೆಗಳನ್ನು ಮಾರಲಾಗುತ್ತಿದೆ.

ಗೋವಿನ ಸಗಣಿ, ಅಕ್ಕಿ ಹಿಟ್ಟು, ತುಪ್ಪ, ಗವಾರಗಮ್ ಬಳಸಿ ತಯಾರಿಸಲಾಗುವ ಈ ಹಣತೆಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲಿದೆ. ಇಲ್ಲಿ ತಯಾರಾದ ಹಣತೆಗಳನ್ನು ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ರಾಜ್ಯದ ಹಲವು ನಗರಗಳಿಗೆ ಕಳಿಸಲಾಗುತ್ತಿದೆ.

‘ಗೋವಿನ ಸಗಣಿಯಿಂದ ಸಿದ್ಧವಾದ ಹಣತೆ ಗಳಿಗೆ ಹೊರರಾಜ್ಯಗಳಿಂದಲೂ ಬೇಡಿಕೆ ಇದೆ. ದೆಹಲಿ, ಮುಂಬೈಗೂ ಕಳಿಸುತ್ತಿದ್ದೇವೆ. ಹೀಗಾಗಿ ಹಣತೆ ಉತ್ಪಾದನಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ’ ಎನ್ನುತ್ತಾರೆ ಪಯೋನಿಧಿ ಗೋಧಾಮದ ಮುಖ್ಯಸ್ಥ ಕೃಷ್ಣ ಅನಂತರಾವ ಕೆಂಭಾವಿ.

‘18 ವರ್ಷಗಳ ಹಿಂದೆ ಎರಡು ಹಸುಗಳಿಂದ ಶುರುವಾದ ಗೋಧಾಮದಲ್ಲೀಗ 32 ಗೋವುಗಳಿವೆ. 30 ಗೋವುಗಳನ್ನು ಬಡ ರೈತರಿಗೆ ನೀಡಿದ್ದೇವೆ. ಗೋಮಯ, ಗೋಮೂತ್ರ ದಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಮೊದಲು ಕೈಗಳಿಂದಲೇ ಹಣತೆ ತಯಾರಿಸುತ್ತಿದ್ದೆವು. ನಾಲ್ಕು ವರ್ಷಗಳಿಂದ ಅಚ್ಚುಗಳನ್ನು ಬಳಸಿ ಹಣತೆ ತಯಾರಿಸುತ್ತಿದ್ದೇವೆ. ಇದರಿಂದ ಉತ್ಪಾದನಾ ಪ್ರಮಾಣ ಹೆಚ್ಚಿದೆ. ಕಳೆದ ವರ್ಷ ದೀಪಾವಳಿಯಲ್ಲಿ ಒಂದು ಲಕ್ಷ ಹಣತೆಗಳನ್ನು ಮಾರಾಟ ಮಾಡಿದ್ದೆವು. ಈ ಬಾರಿ ವ್ಯಾಪಾರ ಕಡಿಮೆ ಇದ್ದು, 60 ಸಾವಿರಕ್ಕೂ ಹೆಚ್ಚು ಹಣತೆಗಳು ಮಾರಾಟ ಆಗಲಿವೆ’ ಎಂದು ವಿವರಿಸಿದರು.

‘75 ಹಣತೆಗಳಿರುವ ಒಂದು ಪ್ಯಾಕ್‌ನ್ನು ₹250ಕ್ಕೆ ಮಾರಾಟ ಮಾಡುತ್ತಿದ್ದೇವೆ. ನ್ಯೂ ರಾಘವೇಂದ್ರ ಕಾಲೊನಿಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಹಿಂಬದಿಯ ನಮ್ಮ ಮನೆಯಲ್ಲಿ ಬಿಡಿಯಾಗಿಯೂ ಹಣತೆ ಮಾರುತ್ತೇವೆ’ ಎನ್ನುತ್ತಾರೆ ಕೃಷ್ಣ ಅವರ ಪತ್ನಿ ರಾಧಾ.

ಮಾಧವ ಗೋಶಾಲೆ: ಕುಸನೂರಿನ ಮಾಧವ ಗೋಶಾಲೆಯಲ್ಲೂ ಗೋವಿನ ಸಗಣಿ ಬಳಸಿ ಹಣತೆಗಳನ್ನು ತಯಾರಿಸಲಾಗುತ್ತಿದೆ. ಮಾತ್ರವಲ್ಲದೆ ಹಣತೆ ತಯಾರಿಸುವ ಬಗ್ಗೆ ಮಹಿಳೆಯರಿಗೆ ಇಲ್ಲಿ ತರಬೇತಿಯನ್ನೂ ನೀಡಲಾಗುತ್ತಿದೆ. ತರಬೇತಿ ನಂತರ ಮಹಿಳೆಯರಿಗೆ ಹಣತೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಹಾಗೂ ಅಚ್ಚುಗಳನ್ನು ನೀಡಲಾಗುತ್ತಿದೆ.

‘ಗಿರಣಿ ಯಂತ್ರ ಬಳಸಿ ಈ ಬಾರಿ ಗೋಶಾಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹಣತೆಗಳನ್ನು ತಯಾರಿಸಲಾಗಿದೆ. ಈ ಪೈಕಿ 13ಸಾವಿರ ಹಣತೆಗಳನ್ನು ನಗರದ ರಾಮೇಶ್ವರ ಕಲ್ಯಾಣ ಮಂಟಪ ಸಮೀಪದ ‘ಸ್ವಾಭಿಮಾನ ಕೇಂದ್ರ’ಕ್ಕೆ ನೀಡಲಾಗಿದೆ’ ಎಂದು ಮಾಧವ ಗೋಶಾಲೆಯ ಪ್ರಮುಖ ಮಹೇಶ ಬೀದರಕರ್ ತಿಳಿಸಿದರು.

ಗೋಮಯ ಹಣತೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಕೃಷ್ಣ ಅನಂತರಾವ ಕೆಂಭಾವಿ (9480441134) ಮತ್ತು ಮಹೇಶ ಬೀದರಕರ್ (9242868095) ಅವರನ್ನು ಸಂಪರ್ಕಿಸಬಹುದು.

ಗೋಮಯ ಹಣತೆಗಳ ವಿಶೇಷತೆ

ಶುದ್ಧ ದೇಸಿ ಗೋವುಗಳ ಸಗಣಿಯಿಂದ ತಯಾರಿಸಲಾದ ಈ ಹಣತೆಗಳು ಅತ್ಯಂತ ಕಡಿಮೆ ತೂಕ ಇವೆ. ಹೀಗಾಗಿ ಇವುಗಳನ್ನು ನೀರಿನಲ್ಲಿ ತೇಲಿ ಬಿಡಬಹುದು. ಮನೆಯ ಒಳಗೆ ಹಾಗೂ ಅಂಗಳದಲ್ಲಿ ಈ ಹಣತೆಗಳನ್ನು ಹಚ್ಚಿದರೆ, ಎಣ್ಣೆ ಅಥವಾ ತುಪ್ಪ ಖಾಲಿಯಾಗುವವರೆಗೂ ಉರಿಯುತ್ತವೆ. ಕೊನೆಗೆ ಹಣತೆ ಕೂಡ ಸಂಪೂರ್ಣವಾಗಿ ಉರಿದುಹೋಗುತ್ತದೆ. ಈ ಹಣತೆಗಳ ಬಳಕೆಯಿಂದ ಸುತ್ತಲಿನ ವಾತಾವರಣ ಶುದ್ಧಗೊಳ್ಳುತ್ತದೆ ಎನ್ನುತ್ತಾರೆ ಕೃಷ್ಣ ಅನಂತರಾವ ಕೆಂಭಾವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು