ಸೋಮವಾರ, ಜನವರಿ 17, 2022
21 °C
* ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯ ಆರೋಪ *ಎಲ್ಲವೂ ಸರಿಯಾಗಿ ನಡೆದಿದೆ ಎಂಬ ಸಮರ್ಥನೆ

ಕ್ರೀಡಾ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: 2022–23ನೇ ಸಾಲಿಗೆ ಕ್ರೀಡಾ ಶಾಲೆ/ಕ್ರೀಡಾ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕ ಪ್ರಕ್ರಿಯೆ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಶುಕ್ರವಾರ ನಡೆಯಿತು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಿರಿಯರ ವಿಭಾಗದಲ್ಲಿ 22 ಬಾಲಕರು, 7 ಬಾಲಕಿಯರು ಪಾಲ್ಗೊಂಡಿದ್ದರು. ಹಿರಿಯ ವಿಭಾಗದಲ್ಲಿ 39 ಬಾಲಕರು, 3 ಬಾಲಕಿಯರು ಪಾಲ್ಗೊಂಡಿದ್ದರು.

ಅದೇ ರೀತಿ ಜೇವರ್ಗಿಯಲ್ಲಿ ಕಿರಿಯರ ವಿಭಾಗದಲ್ಲಿ 80, ಹಿರಿಯರ ವಿಭಾದಲ್ಲಿ 30, ಆಳಂದಲ್ಲಿ ಕಿರಿಯರ ವಿಭಾಗದಲ್ಲಿ 20, ಅಫಜಲಪುರದಲ್ಲಿ ಕಿರಿಯರ ವಿಭಾಗದಲ್ಲಿ 120, ಹಿರಿಯರ ವಿಭಾಗದಲ್ಲಿ 70, ಚಿತ್ತಾಪುರದಲ್ಲಿ ಕಿರಿಯರ ವಿಭಾಗದಲ್ಲಿ 52, ಹಿರಿಯರ ವಿಭಾಗದಲ್ಲಿ 28, ಸೇಡಂ ಕಿರಿಯರ ವಿಭಾಗದಲ್ಲಿ 80, ಹಿರಿಯರ ವಿಭಾಗದಲ್ಲಿ 100 ಮತ್ತು ಚಿಂಚೋಳಿಯಲ್ಲಿ ಕಿರಿಯರ ವಿಭಾಗದಲ್ಲಿ 45 ಮತ್ತು ಹಿರಿಯರ ವಿಭಾಗದಲ್ಲಿ 50 ಕ್ರೀಡಾಪಟುಗಳು ಭಾಗವಹಿಸಿದ್ದರು.

ಅಥ್ಲೆಟಿಕ್ಸ್, ಹಾಕಿ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಕುಸ್ತಿ, ಜೂಡೊ, ಸೈಕ್ಲಿಂಗ್ ಮತ್ತು ಫುಟ್‌ಬಾಲ್‌ ಕ್ರೀಡೆಗಳಿಗೆ ಆಯ್ಕೆ ಪ್ರಕ್ರಿಯೆಗಳು ನಡೆದವು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಇರುವ ಕ್ರೀಡಾ ವಸತಿ ನಿಲಯದಲ್ಲಿ ಹಾಕಿ ಮತ್ತು ಅಥ್ಲೆಟಿಕ್ಸ್‌ಗೆ ಪ್ರಾಥಮಿಕ ವಿಭಾಗದಲ್ಲಿ 50 ಮತ್ತು ಪ್ರೌಢಶಾಲಾ ವಿಭಾಗದಲ್ಲಿ 35 ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೋಚ್‌ ಸಂಜಯ ಬಾಣದ ತಿಳಿಸಿದರು.

ಉಳಿದ ಕ್ರೀಡೆಗಳಿಗೆ ಬೆಂಗಳೂರಿನ ವಿದ್ಯಾನಗರದ ಮತ್ತು ಕೊಡಗಿನ ಕೂಡಿಗೆಯ ಕ್ರೀಡಾಶಾಲೆ ಮತ್ತು ವಿವಿಧ ಜಿಲ್ಲೆಗಳ ಕ್ರೀಡಾ ವಸತಿನಿಲಯಗಳಿಗೆ ಆಯ್ಕೆ ಮಾಡಲಾಗುತ್ತದೆ. ಕಲಬುರಗಿ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಗಳು ಜನವರಿ 10 (ಏಳನೇ ತರಗತಿ) ಮತ್ತು ಜನವರಿ 11 (10ನೇ ತರಗತಿ) ರಂದು ನಡೆಯಲಿವೆ. ಶುಕ್ರವಾರದ ಆಯ್ಕೆ ಪ್ರಕ್ರಿಯೆಯಲ್ಲಿ ಅಯ್ಕೆ ಆದ ಕ್ರೀಡಾಪಟುಗಳು ವಿಭಾಗದ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.‌

ಐದನೇ ತರಗತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಿಗೇರ್, ಕೋಚ್‌ಗಳಾದ ಪ್ರವಿಣ್ ಪುಣೆ, ಸ್ಟೀವನ್ ಇದ್ದರು.

 

‘ಆಯ್ಕೆಗೆ ಅವಕಾಶ ನೀಡಿ’

ಕರುಣೇಶ್ವರ ನಗರದ ಸಿದ್ಧಾರೂಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಹಾದೇವಿಗೆ ಇನ್ನೊಮ್ಮೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಕೇಂದ್ರೀಯ ವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವಶರಣಪ್ಪ ಅವರು ಒತ್ತಾಯಿಸಿದರು.

ಕ್ರೀಡಾಪಟುಗಳ ಆಯ್ಕೆ ಕುರಿತು ಯುವ ಸಬಲೀಕರಣ ಕ್ರೀಡಾ ಇಲಾಖೆಯವರು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ 14 ವರ್ಷದ ಒಳಗಿನ ಬಾಲಕ, ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಹೇಳಲಾಗಿತ್ತು. ಈ ವಿದ್ಯಾರ್ಥಿನಿ 14 ವರ್ಷದ ಒಳಗಿದ್ದರೂ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂಬ ಕಾರಣಕ್ಕೆ ಆಯ್ಕೆ ಪರಿಗಣಿಸಿಲ್ಲ ಎಂದು ದೂರಿದರು.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ಇದೆ. ಶೂ ಇಲ್ಲದೆ ಕ್ರೀಡಾಪಟುಗಳು ಭಾಗವಹಿಸುವಂತಿಲ್ಲ. ಆದರೂ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಸಿಗಬೇಕು. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬುದಷ್ಟೇ ನಮ್ಮ ಆಶಯ ಎಂದರು.

ಕಳೆದ ವರ್ಷವೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ವಿದ್ಯಾರ್ಥಿನಿ ಆಯ್ಕೆ ಆಗಿದ್ದಳು ಎಂದು ಹೇಳಿದ್ದರು. ಆದರೆ, ದಾಖಲಾತಿ ಸಂದರ್ಭದಲ್ಲಿ ಪರಿಗಣಿಸಲಿಲ್ಲ. ತಮಗೆ ಬೇಕಾದ ಕ್ರೀಡಾಪಟುಗಳನ್ನು ಕ್ರೀಡಾ ನಿಲಯಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೋಚ್‌ ಸಂಜಯ ಬಾಣದ ಅವರು, ಕಳೆದ ವರ್ಷದ ಆಯ್ಕೆ ಪ್ರಕ್ರಿಯೆಯಲ್ಲಿ ಮಹಾದೇವಿ 11 ವರ್ಷದೊಳಗಿನವರ ವಿಭಾಗದಲ್ಲಿ ಭಾಗವಹಿಸಿದ್ದಳು. ಆದರೆ, ಅವಳಿಗೆ ಐದು ತಿಂಗಳು ಹೆಚ್ಚು ವಯಸ್ಸಾಗಿತ್ತು. ಹೀಗಾಗಿ ತಿರಸ್ಕರಿಸಲಾಗಿತ್ತು ಎಂದರು.

14 ವರ್ಷದ ಒಳಗಿನವರು ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡಬೇಕು. 11 ವರ್ಷದ ಒಳಗಿನವರು ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಎಂಬ ನಿಯಮ ಇದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.