ದುಬೈ: ಎರಡು ವರ್ಷಗಳ ಹಿಂದೆ ನಡೆದಿದ್ದ ಎಮಿರೆಟ್ಸ್ ಟಿ10 ಕ್ರಿಕೆಟ್ ಲೀಗ್‌ನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಎಂಟು ಮಂದಿಯ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕರಣ ದಾಖಲಿಸಿದೆ.
ಈ ಎಂಟು ಮಂದಿಯಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ಭಾರತ ಮೂಲದ ಫ್ರ್ಯಾಂಚೈಸಿಯೊಂದರ ಮಾಲೀಕರಾದ ದಂಪತಿ ಪರಾಗ ಸಂಘ್ವಿ ಮತ್ತು ಕೃಷನ್ ಕುಮಾರ್ ಚೌಧರಿ ಕೂಡ ಸೇರಿದ್ದಾರೆ.ಈ ದಂಪತಿಯು ಪುಣೆ ಡೆವಿಲ್ಸ್ ತಂಡದ ಸಹಮಾಲೀಕರಾಗಿದ್ದಾರೆ. ಇದೇ ತಂಡದ ಆಟಗಾರ, ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ನಾಸೀರ್ ಹುಸೇನ್ ಅವರ ಮೇಲೂ ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲಂಘನೆಯ ದೂರು ದಾಖಲಾಗಿದೆ.
ಭಾರತ ಮೂಲದ ಮತ್ತೊಬ್ಬ ಬ್ಯಾಟಿಂಗ್ ಕೋಚ್ ಸನ್ನಿ ಧಿಲ್ಲೋನ್ ಕೂಡ ಆರೋಪಿಯಾಗಿದ್ದಾರೆ.
‘2021ರಲ್ಲಿ ನಡೆದಿದ್ದ ಅಬುಧಾಬಿ ಟಿ10 ಕ್ರಿಕೆಟ್ ಲೀಗ್ ಪಂದ್ಯಗಳಲ್ಲಿ ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸುವಂತಹ ಚಟುವಟಿಕೆಗಳಲ್ಲಿ ಇವರು ತೊಡಗಿದ್ದರು. ಅಂತರರಾಷ್ಟ್ರೀಯ ಮತ್ತು ದೇಶಿ ಪಂದ್ಯಗಳಲ್ಲಿ ಫಲಿತಾಂಶ, ಪಂದ್ಯ ದ ಪ್ರತಿಯೊಂದು ಹಂತದಲ್ಲಿ ಬೆಟ್ಟಿಂಗ್ ಮಾಡುವುದನ್ನು ನಿಷೇಧಿಸಿರುವ 2.2.1ರ ನಿಯಮದ ಪ್ರಕಾರ ಮೊಕದ್ದಮೆ ದಾಖಲಾಗಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.