ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ 22ನೇ ಸ್ಥಾನ

ಮೊದಲ ಮೂರು ಸ್ಥಾನ ಪಡೆದ ಇಂಗ್ಲಿಷ್‌ ಮಾಧ್ಯಮ ಶಾಲೆಗಳು, ಫಲಿತಾಂಶದಲ್ಲಿ ತುಸು ಸುಧಾರಣೆ
Last Updated 10 ಆಗಸ್ಟ್ 2020, 15:04 IST
ಅಕ್ಷರ ಗಾತ್ರ

ಕಲಬುರ್ಗಿ: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ 22ನೇ ಸ್ಥಾನ ಪಡೆದಿದ್ದು ‘ಬಿ’ ಗ್ರೇಡ್‌ ಬಂದಿದೆ. ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ತುಸು ಸುಧಾರಣೆ ಕಂಡಿದೆ.

ಅಫಜಲಪುರ ತಾಲ್ಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಸ್‌ ಆಗುವ ಮೂಲಕ ‘ಎ’ ಗ್ರೇಡ್‌ ಲಭಿಸಿದೆ. ಆಳಂದ, ಚಿಂಚೋಳಿ, ಕಲಬುರ್ಗಿ ಉತ್ತರ, ಕಲಬುರ್ಗಿ ದಕ್ಷಿಣ, ಜೇವರ್ಗಿ ತಲ್ಲೂಕುಗಳು ‘ಬಿ’ ಗ್ರೇಡ್‌ ಮತ್ತು ಚಿತ್ತಾಪುರ ಹಾಗೂ ಸೇಡಂ ‘ಸಿ’ ಗ್ರೇಡ್‌ ಪಡೆದಿವೆ.

ಗ್ರೇಡ್‌ ಲೆಕ್ಕಾಚಾರ: ಶೇ 75ಕ್ಕೂ ಹೆಚ್ಚು ಫಲಿತಾಂಶಕ್ಕೆ ‘ಎ’ ಗ್ರೇಡ್‌, ಶೇ 60ರಿಂದ ಶೇ 75ರೊಳಗಿನ ಫಲಿತಾಂಶಗಳನ್ನು ಬಿ ಹಾಗೂ ಶೇ 60ಕ್ಕೂ ಕಡಿಮೆ ಇದ್ದ ಫಲಿತಾಂಶವನ್ನು ‘ಸಿ’ ಎಂದು ಪರಿಗಣಿಸಲಾಗಿದೆ.

2017ರಲ್ಲಿ 27ನೇ ಸ್ಥಾನ, 2018 ಹಾಗೂ 19ರಲ್ಲಿ 30ನೇ ಸ್ಥಾನ ಪಡೆದಿದ್ದ ಜಿಲ್ಲೆ ನಾಲ್ಕು ವರ್ಷಗಳ ಬಳಿಕ ಮತ್ತೆ ಸುಧಾರಣೆ ಕಂಡಿದೆ.

ಈ ಬಾರಿ ಜಿಲ್ಲೆಯಲ್ಲಿ ಒಟ್ಟು 284 ಶಾಲೆಗಳು ಎ, 201 ಶಾಲೆಗಳು ಬಿ ಹಾಗೂ 269 ಶಾಲೆಗಳು ಸಿ ಶ್ರೇಣಿ ಪಡೆದಿವೆ. ಕಲಬುರ್ಗಿ ಉತ್ತರ ಶೈಕ್ಷಣಿಕ ತಾಲ್ಲೂಕಿನಲ್ಲಿ 71 ಶಾಲೆಗಳು ಎ ಶ್ರೇಣಿ ಪಡೆಯುವ ಮೂಲಕ ಮುಂಚೂಣಿಯಲ್ಲಿವೆ. ಸೇಡಂ ತಾಲ್ಲೂಕಿನಲ್ಲಿ ಕೇವಲ 4 ಶಾಲೆಗಳು ಮಾತ್ರ ಎ ಶ್ರೇಣಿಯಲ್ಲಿದ್ದು, ಕಡೆಯ ಸ್ಥಾನ ಪಡೆದಿದೆ.

ಮಿಲೇನಿಯಂ ಶಾಲೆಯ ಅಭಿಷೇಕ ಜಿಲ್ಲೆಗೆ ಪ್ರಥಮ

ಕಲಬುರ್ಗಿ ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಮಿಲೇನಿಯಂ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ಅಭಿಷೇಕ 621 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಮೊದಲಿಗನಾಗಿದ್ದಾನೆ.

ಮೊದಲ ಭಾಷೆಯಾದ ಇಂಗ್ಲಿಷ್‌ನಲ್ಲಿ 125, ಹಿಂದಿಯಲ್ಲಿ 100, ಕನ್ನಡ, ಗಣಿತ, ವಿಜ್ಞಾನ ಹಾಗೂ ಸಮಾಜವಿಜ್ಞಾನದಲ್ಲಿ ತಲಾ 99 ಅಂಕಗಳನ್ನು ಅಭಿಷೇಕ ಬಾಚಿಕೊಂಡಿದ್ದಾರೆ.

ದ್ವಿತೀಯ ಸ್ಥಾನವನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಅದರಲ್ಲಿ, ಇಲ್ಲಿನ ಕೋರ್ಟ್‌ ರಸ್ತೆಯಲ್ಲಿರುವ ಎಸ್‌ಆರ್‌ಎನ್‌ ಮೆಹ್ತಾ ಇಂಗ್ಲಿಷ್‌ ಮೀಡಿಯಂ ಪ್ರೌಢಶಾಲೆಯ ಪ್ರಶಾಂತ ಹಾಗೂ ಭಾಗೇಶ ತಲಾ 620 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಸಮನಾಗಿ ಹಂಚಿಕೊಂಡಿದ್ದಾರೆ.

ಇವರಲ್ಲಿ ಭಾಗೇಶ ಇಂಗ್ಲಿಷ್‌ನಲ್ಲಿ 124, ಕನ್ನಡ, ಹಿಂದಿ ಹಾಗೂ ಗಣಿತ ವಿಷಯಗಳಲ್ಲಿ ತಲಾ ನೂರಕ್ಕೆ 100, ವಿಜ್ಞಾನದಲ್ಲಿ 99 ಹಾಗೂ ಸಮಾಜ ವಿಜ್ಞಾನದಲ್ಲಿ 97 ಅಂಕ ಪಡೆದಿದ್ದಾನೆ.

ಅದೇ ರೀತಿ ಚರ್ಚ್‌ ರಸ್ತೆಯಲ್ಲಿರುವ ಸೇಂಟ್‌ ಮೇರಿಸ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ವೈಷ್ಣವಿ ಕೂಡ 620 ಪಡೆಯುವ ಮೂಲಕ ಎರಡನೇ ಸ್ಥಾನ ಪ‍ಡೆದಿದ್ದಾಳೆ. ವೈಷ್ಣವಿ ಇಂಗ್ಲಿಷ್‌ನಲ್ಲಿ 124, ಕನ್ನಡ ಹಾಗೂ ಗಣಿತದಲ್ಲಿ ತಲಾ 99, ಹಿಂದಿ ಹಾಗೂ ವಿಜ್ಞಾನದಲ್ಲಿ ತಲಾ 100 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾಳೆ.‌

ಜಾಜಿ ಫೌಂಡೇಶನ್‌ನ ಗುರುಕುಲ ಪಬ್ಲಿಕ್‌ ಸ್ಕೂಲ್‌ನ ಸೋಮೇಶ್ವರಿ 619 ಅಂಕಗಳೊಂದಿಗೆ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT