ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಡಿಬಿ: ಹೊರಗುತ್ತಿಗೆ ಸಿಬ್ಬಂದಿಯೇ ಆಧಾರ

Last Updated 13 ಸೆಪ್ಟೆಂಬರ್ 2022, 22:30 IST
ಅಕ್ಷರ ಗಾತ್ರ

ಕಲಬುರಗಿ: ಹಿಂದುಳಿದ ಸಂಕೋಲೆಯಿಂದ ಹೊರತರಲು ಸ್ಥಾಪಿತ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಸಿಬ್ಬಂದಿ ಕೊರತೆಯಿಂದ ಸೊರಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವವನ್ನುವರ್ಷಪೂರ್ತಿ ವಿಜೃಂಭಣೆಯಿಂದ ಆಚರಿಸಲು ಸಜ್ಜಾ ಗಿದೆ. ಆದರೆ, ಮಂಡಳಿಯಲ್ಲಿ ವಿವಿಧ ವಿಭಾಗಗಳ ಕಾಯಂ ಅಧಿಕಾರಿಗಳ ಮತ್ತು ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ.

‘ಮಂಡಳಿಗೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗುತ್ತಿದೆ. ಆದರೆ, ಸಿಬ್ಬಂದಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಸರ್ಕಾರ ಕೊಟ್ಟ ಹಣ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ’ ಎಂದುಹೋರಾಟಗಾರರು ಆರೋಪಿಸುತ್ತಾರೆ.

‘ಕೆಕೆಆರ್‌ಡಿಬಿಯಲ್ಲಿ 83 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ 25 ಭರ್ತಿಯಾದ ಹುದ್ದೆಗಳಿದ್ದು, ನಾಲ್ವರು ನಿಯೋಜನೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. 35 ಮಂದಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಒಟ್ಟು 15 ಹುದ್ದೆಗಳು ಖಾಲಿ ಇವೆ. ಮಂಡಳಿಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ’ ಎಂದು ಅವರು ಹೇಳುತ್ತಾರೆ.

ಖಾಲಿ ಇರುವ ಹುದ್ದೆಗಳಿಗೆ ಪೂರ್ಣ ಪ್ರಮಾಣದ ಕಾಯಂ ನೌಕರರನ್ನು ನೇಮಿಸುವ ಬದಲು ಹೊರಗುತ್ತಿಗೆ, ನಿವೃತ್ತ ನೌಕರರಿಗೆ ಮಣೆ ಹಾಕಲಾಗಿದೆ. ಗುತ್ತಿಗೆ ನೌಕರರಿಗೆ ಸಂಬಳ ಕಡಿಮೆ ಇರುತ್ತದೆ. ಇತರೆ ಸೌಲಭ್ಯ ಇರುವುದಿಲ್ಲ. ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲು ಆಗದು. ಇದರಿಂದ ಕಡತಗಳನ್ನು ನಿಭಾಯಿಸುವುದು, ಕಾಮಗಾರಿಗಳನ್ನು ಪರಿಶೀಲಿಸುವುದು, ದಾಖಲೆಗಳನ್ನು ನಿರ್ವಹಿಸುವುದು ಸೇರಿ ಹಲವು ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಕಾಮಗಾರಿಗಳ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳಾಗುತ್ತವೆ. ನೂರಾರು ಕೋಟಿ ರೂಪಾಯಿ ಅನುದಾನ ಬಳಕೆಗೆ ಅಡ್ಡಿ ಯಾಗುತ್ತಿದೆ’ ಎಂಬುದು ತಜ್ಞರ ಹೇಳಿಕೆ

‘ಮಂಡಳಿಯ ಕಾರ್ಯದರ್ಶಿ ಮತ್ತು ಯೋಜನಾ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಪ್ರಭಾರಿಯಾಗಿ ಕೃಷ್ಣ ಬಾಜಪೇಯಿ ಅವರನ್ನು ಈಚೆಗೆ ನಿಯೋಜಿಸಲಾಗಿದೆ. ಪೂರ್ಣಪ್ರಮಾಣದ ಕಾರ್ಯದರ್ಶಿ ಇದ್ದರೆ ಯೋಜನೆಗಳ ಸಿದ್ಧತೆ ಹಾಗೂ ಅನುಷ್ಠಾನಕ್ಕೆ ಚುರುಕು ಸಿಗುತ್ತದೆ’ ಎಂಬುದು ಅವರ ಅಭಿಪ್ರಾಯ.

‘ಈಚೆಗಷ್ಟೇ ಉಪಕಾರ್ಯದರ್ಶಿ ನಿಯೋಜನೆಗೊಂಡಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಕೇಸ್ ವರ್ಕರ್ ಸಹ ಇರುವ ಕಾರಣ ಕೆಲಸದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಈಗಿರುವ ಸಿಬ್ಬಂದಿಯಲ್ಲೇ ನಿತ್ಯದ ಕೆಲಸ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ. ₹10 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ಜಿಲ್ಲಾಧಿಕಾರಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ವ್ಯಾಪ್ತಿಗೂ ಬರುವ ಕಾರಣ ನಮ್ಮ ನಿರ್ವಹಣೆ ಹೊರೆ ಕಡಿಮೆಯಾಗಿದೆ’ ಎಂದು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಗತಿಯಲ್ಲಿ ನೇಮಕಾತಿ ಪ್ರಕ್ರಿಯೆ’

‘ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕಡತಗಳ ವಿಲೇವಾರಿ, ಕಾಮಗಾರಿಗಳ ಪರಿಶೀಲನೆಯಲ್ಲಿ ವಿಳಂಬ ಆಗುತ್ತಿಲ್ಲ. ಎಲ್ಲವೂ ಸರಾಗವಾಗಿ ನಡೆದಿದೆ. ಇನ್ನಷ್ಟು ಸಿಬ್ಬಂದಿ ಒದಗಿಸಲು ಮುಖ್ಯಮಂತ್ರಿಯವರಿಗೂ ಕೋರಲಾಗುವುದು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಜ್ಞ ಅಧಿಕಾರಿಗಳ ತಂಡ ನೇಮಿಸಿ’

ಆರಂಭದಿಂದಲೂ ಕೆಕೆಆರ್‌ಡಿಬಿಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಅಮೃತ ಮಹೋತ್ಸವದ ವರ್ಷದಲ್ಲಿ ಆದರೂ ಮುಂದಿನ 10 ವರ್ಷಗಳ ಅಭಿವೃದ್ಧಿಯ ದೃಷ್ಟಿಕೋನ ಇರಿಸಿಕೊಂಡು ಯೋಜನೆಗಳನ್ನು ರೂಪಿಸುವ ಪರಿಣಿತ ಯೋಜನಾ ಅಧಿಕಾರಿಗಳ ತಂಡ ನೇಮಕವಾಗಲಿ’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT