ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಿದ್ಯಾರ್ಥಿನಿಯರು ಪ್ರಶ್ನಿಸುವುದನ್ನು ಕಲಿತುಕೊಳ್ಳಿ’

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಿವಿಮಾತು
Published 28 ಜೂನ್ 2024, 6:49 IST
Last Updated 28 ಜೂನ್ 2024, 6:49 IST
ಅಕ್ಷರ ಗಾತ್ರ

ಕಲಬುರಗಿ: ವಿದ್ಯಾರ್ಥಿನಿಯರು ಸಮಾಜದಲ್ಲಿ ಹಾಗೂ ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ(ಸ್ವಾಯತ್ತ) ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಜಿಮ್ಸ್‌ನಲ್ಲಿ ವಾರಗಟ್ಟಲೇ ನೀರಿನ ಪೂರೈಕೆ ಇರಲಿಲ್ಲ. ಗ‌ರ್ಭಿಣಿಯರು, ಬಾಣಂತಿಯರು ಅಷ್ಟು ದಿನ ಸ್ನಾನ ಇಲ್ಲದೇ ಹೇಗೆ ಕಳೆಯಬೇಕು? ಇಂತಹ ಪ‍ರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ನಿಮ್ಮ ಮನೆಯ ಹತ್ತಿರ ಕಸ ಬಿದ್ದಿದ್ದರೆ ಕೂಡಲೇ ಕಾರ್ಪೊರೇಷನ್‌ನವರಿಗೆ ಕರೆ ಮಾಡಬೇಕು. ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಸಿಬ್ಬಂದಿ ನಿಮ್ಮೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ನಿಮ್ಮ ದೂರು ಸ್ವೀಕರಿಸಬೇಕು. ಠಾಣೆಯಲ್ಲಿ ಸೂಕ್ತ ಸ್ಪಂದನೆ ದೊರೆಯದಿದ್ದರೆ ಪೊಲೀಸ್ ಠಾಣೆಯ ಹೊರಗೆ ಅಂಟಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಬೇಕು’ ಎಂದು ತಿಳಿಸಿದರು.

‘ಯಾವುದೇ ಸಂದರ್ಭದಲ್ಲಿ ನಿಮಗೆ ಏನೇ ತೊಂದರೆಯಾದರೂ ನನಗೆ ಕರೆ ಮಾಡಿ ಇಲ್ಲವೇ ವಾಯ್ಸ್ ಮೆಸೇಜ್ ಕಳಿಸಿ’ ಎಂದು ಹೇಳಿದ ನಾಗಲಕ್ಷ್ಮಿ ಅವರು ವಿದ್ಯಾರ್ಥಿನಿಯರಿಗೆ ತಮ್ಮ ಮೊಬೈಲ್ ನಂಬರ್ ನೀಡಿದರು.

ನಂತರ ನಡೆದ ಸಂವಾದದಲ್ಲಿ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ನಾಗಲಕ್ಷ್ಮಿ, ‘ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬರಬೇಕು. ಚುನಾವಣೆಯಲ್ಲಿ ಆಯ್ಕೆಯಾಗಿ ಉತ್ತಮ ಆಡಳಿತ ನೀಡಿದರೆ ಜನರು ನಿಮ್ಮ ಹಿಂದೆ ಇರುತ್ತಾರೆ. ನೀವೊಂದು ಪ್ರಬಲ ಶಕ್ತಿಯಾಗಿ ಕಾಣಿಸಿಕೊಂಡಾಗ ಯಾವುದೇ ಸರ್ಕಾರವಿದ್ದರೂ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ. ಹಾಗಾಗಿ, ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ’ ಎಂದರು.

‘ಪಠ್ಯಪುಸ್ತಕಗಳಲ್ಲಿ ಲೈಂಗಿಕ ಶಿಕ್ಷಣ ಕೊಟ್ಟರೆ ಆ ಬಗ್ಗೆ ಇರುವ ಅನಗತ್ಯ ಭಯ, ಆತಂಕ ನಿವಾರಣೆಯಾಗುತ್ತದೆ. ಪುಸ್ತಕಗಳಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ, ಸಸಿಗಳನ್ನು ನೆಡುವ ಬಗ್ಗೆಯೂ ಪಾಠಗಳು ಇರಬೇಕು’ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯೆ ಪ್ರೊ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜಿನ ಕಲಾವಿಭಾಗದ ಡೀನ್ ಪ್ರೊ.ವಿಜಯಕುಮಾರ ಸಾಲಿಮನಿ, ವಾಣಿಜ್ಯ ವಿಭಾಗದ ಡೀನ್ ಪ್ರೊ.ರಾಜಕುಮಾರ ಸಲಗರ, ಸಾಂಸ್ಕೃತಿಕ ಕಾರ್ಯದರ್ಶಿ ಬಲಭೀಮ ಸಾಂಗ್ಲಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸುರೇಶ ಮಾಳೆಗಾಂವ ವೇದಿಕೆಯಲ್ಲಿದ್ದರು.

‘ವಿದ್ಯಾರ್ಥಿನಿಯರಿಗೆ ಹೆದರಿಸಿದರೆ ಸಮನ್ಸ್’

‘ವಿದ್ಯಾರ್ಥಿನಿಯರಿಗೆ ಉಪನ್ಯಾಸಕರು ಪ್ರಾಧ್ಯಾಪಕರು ತಮ್ಮ ಮಾತು ಕೇಳದಿದ್ದರೆ ಆಂತರಿಕ ಅಂಕ ಕೊಡುವುದಿಲ್ಲ ಎಂದು ಹೆಸರಿಸುವಂತಿಲ್ಲ. ಒಂದು ವೇಳೆ ಅಂತಹ ಘಟನೆಗಳು ನಡೆದರೆ ವಿದ್ಯಾರ್ಥಿನಿಯರು ಆಯೋಗಕ್ಕೆ ದೂರು ನೀಡಬಹುದು. ತಕ್ಷಣವೇ ಅಂಥ ಪ್ರಾಧ್ಯಾಪಕರಿಗೆ ಸಮನ್ಸ್ ನೀಡುತ್ತೇನೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸ್ಪಷ್ಟಪಡಿಸಿದರು.

‘ಅತಿಥಿ’ ಬೋಧಕರಿಗಿಲ್ಲ ಹೆರಿಗೆ ರಜೆ ಸೌಲಭ್ಯ’

‘ಕಾಯಂ ಉಪನ್ಯಾಸಕರಷ್ಟೇ ಕೆಲಸ ಮಾಡಿದರೂ ಕಡಿಮೆ ಸಂಬಳ ಪಡೆಯುವ ಅತಿಥಿ ಉಪನ್ಯಾಸಕಿಯರಿಗೆ ಸರ್ಕಾರ ಹೆರಿಗೆ ರಜೆ ನೀಡುತ್ತಿಲ್ಲ’ ಎಂದು ಅತಿಥಿ ಉಪನ್ಯಾಸಕಿ ಅರುಣಾ ಹಿರೇಮಠ ದೂರಿದರು. ಸಂವಾದದಲ್ಲಿ ಮಾತನಾಡಿದ ಅವರು ‘ಈ ಬಗ್ಗೆ ಇಬ್ಬರು ಅತಿಥಿ ಉಪನ್ಯಾಸಕಿಯರು ಸಲ್ಲಿಸಿದ ಅರ್ಜಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಯಾಕೆ ಇಷ್ಟೊಂದು ತಾರತಮ್ಯ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT