ಭಾನುವಾರ, ಆಗಸ್ಟ್ 14, 2022
20 °C
ಆರ್ಯ ಈಡಿಗ ಸಮುದಾಯಕ್ಕೆ ಅಭಿವೃದ್ಧಿ ನಿಗಮಕ್ಕೆ ಒತ್ತಾಯ

‘ಆಮರಣಾಂತ ಉಪವಾಸ ಸತ್ಯಾಗ್ರಹ 20ರಿಂದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಆರ್ಯ ಈಡಿಗ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲೂ ಸೇಂದಿ ಇಳಿಸುವುದಕ್ಕೆ ಅನುಮತಿ ನೀಡಬೇಕು’ ಎಂದು ಆಗ್ರಹಿಸಿ ಇದೇ 20ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಳ ಅಧ್ಯಕ್ಷ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘ಹೋರಾಟದಲ್ಲಿ 20 ಸಾವಿರ ಜನ ಸೇರುವ ನಿರೀಕ್ಷೆ ಹೊಂದಲಾಗಿದ್ದು, ಮಾಜಿ ಸಚಿವರಾದ ಯು.ಟಿ.ಖಾದರ್, ಡಾ.ಶರಣಪ್ರಕಾಶ ಪಾಟೀಲ, ನಟ ಸುಮನ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿ ಮಾತನಾಡಲಿದ್ದಾರೆ’ ಎಂದರು.

‘ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಮುದಾಯ ಪ್ರತಿನಿಧಿಸುವ ಇಬ್ಬರು ಸಚಿವರು, ಶಾಸಕರಿದ್ದಾರೆ. ಆದರೂ ಉಪಯೋಗವಾಗಿಲ್ಲ. ನಮಗೆ ಸಮುದಾಯ ಮುಖ್ಯವಾಗಿದೆಯೇ ಹೊರತು ಯಾವ ಪಕ್ಷವಾಗಲಿ, ನಾಯಕರಲ್ಲ. ಹೀಗಾಗಿ, ಒಂದು ಸಮುದಾಯವೇ ಬೇಕಿದ್ದರೆ ಸಚಿವರು, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲಿ. ಆದರೆ, ಸರ್ಕಾರದ ಪರ ಸಂಧಾನಕಾರರಾಗಿ ಓಲೈಸುವುದಕ್ಕೆ ಬರಬೇಡಿ’ ಎಂದು ತಾಕೀತು ಮಾಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿ ₹ 500 ಕೋಟಿ ಅನುದಾನ ನೀಡಬೇಕು. ಹೊಸದಾಗಿ ಸಾರಾಯಿ ಮತ್ತು ವೈನ್‌ ಶಾಪ್‌ಗಳ ಲೈಸೆನ್ಸ್ ಕೊಡುವಾಗ ಈಡಿಗ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ಮೀಡಬೇಕು. ಎಂಎಸ್‌ಐಎಲ್ ಮಳಿಗೆಗಳಲ್ಲಿ ಈಡಿಗ ಯುವಕರನ್ನು ನೇಮಕ ಮಾಡಬೇಕು. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮಹಾನ್ ಸಮಾಜ ಸುಧಾಕರಾದ ನಾರಾಯಣ ಗುರುಗಳ ಮೂರ್ತಿ ಸ್ಥಾಪಿಸಬೇಕು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಭವ್ಯ ಸಮುದಾಯ ಭವನ ಹಾಗೂ ಸಮಾಜದ ಹೆಚ್ಚಿರುವ ಗ್ರಾಮಗಳಲ್ಲಿ ಸಮುದಾಯ ಭವನ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು. ಮೂರ್ತೆದಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಅಶೋಕ ಗುತ್ತೇದಾರ ಬಡದಾಳ, ವೆಂಕಟೇಶ ಕಡೇಚೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು