ಶನಿವಾರ, ಜೂಲೈ 4, 2020
24 °C
ಸಹಾಯವಾಣಿಗೆ ತಿಂಗಳಲ್ಲಿ 422 ಕರೆಗಳು; ನಿರಾಶ್ರಿತರಿಗೆ ನೆರವಾದ ಅಧಿಕಾರಿಗಳು

ಕಲಬುರ್ಗಿ: ಬಡಿಬ್ಯಾಡಂತ ಪೊಲೀಸರಿಗೆ ಹೇಳ್ರಿ!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಮ್ಮ ಮಗ ಸಂತಿ ತರಾಕ ಕಿರಾಣಿ ಅಂಗಡಿಗಿ ಹೊಂಟಾನ. ರೋಡಿನ್ಯಾಗ ಪೊಲೀಸರು ಸಿಕ್ಕ ಸಿಕ್ಕವ್ರನ್ ಬಡ್ಯಾಕತ್ತಾರಂತ್ರಿ, ನಮ್ಮ ಮಗನಿಗೆ ಬಡಿಬ್ಯಾಡಂತ ಹೇಳ್ರಿ. ನಮ್ಮನಿ ಗ್ಯಾಸ್ ಮುಗಿದ ಮೂರು ದಿನಾ ಆಯ್ತು, ಗ್ಯಾಸಿನ ಅಂಗಡಿಯವರಿಗೆ ಫೋನ್‌ ಮಾಡಿ ಸ್ವಲ್ಪ ಹೇಳ್ರಿ.. ಮಗ್ಗಲ ಓಣ್ಯಾಗ ಹಾಲು ಕೊಟ್ಟು ಹೋಗ್ಯಾರಂತ, ನಮ್ಮನಿಗೂ ಕೊಡಾಕ್‌ ಹೇಳ್ರಿ...

–ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹಳ್ಳಿ ಹಾಗೂ ನಗರಗಳಿಗೆ ಅಪರಿಚಿತರು ಬಂದರೆ ಮಾಹಿತಿ ನೀಡಲು ಜಿಲ್ಲಾಡಳಿತ ಆರಂಭಿಸಿರುವ ಸಹಾಯವಾಣಿಗೆ ಬರುತ್ತಿರುವ ಕೆಲವು ಕರೆಗಳ ಝಲಕ್ ಇವು!

ಬರೀ ಇಂಥವೇ ಕರೆಗಳು ಬರುತ್ತವೆ ಎಂದೂ ಹೇಳಲಾಗುವುದು. ಕೆಲವು ನಿಜವಾಗಿಯೂ ಜಿಲ್ಲಾಡಳಿತವು ನೆರವು ನೀಡಲು ಅನುಕೂಲವಾಗುವಂಥ ಕರೆಗಳೂ ಬಂದಿವೆ. ಮಾರ್ಚ್‌ 15ರಂದು ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಏಪ್ರಿಲ್‌ 16ರ ಸಂಜೆ 5 ಗಂಟೆಯವರೆಗೆ ಒಟ್ಟು 422 ಕರೆಗಳು ಬಂದಿವೆ. ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ಇದರ ನಿರ್ವಹಣೆಗಾಗಿ ಒಟ್ಟು ಆರು ಜನ ಸಿಬ್ಬಂದಿಯನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗಿದೆ.

‘ಹೆಲ್ಪ್‌ಲೈನ್‌ ಆರಂಭವಾದ ಕೆಲವು ದಿನಗಳವರೆಗೆ ತಮ್ಮ ಓಣಿಗಳಿಗೆ ಯಾರಾದರೂ ಅಪರಿಚಿತರು ಬಂದರೆ ಜನರು ಫೋನ್‌ ಮಾಡಿ ಮಾಹಿತಿ ನೀಡುತ್ತಿದ್ದರು. ಆದರೆ, ಎರಡು ವಾರಗಳಿಂದ ಅಪರಿಚಿತರು, ಕೊರೊನಾ ಶಂಕಿತರ ಬಗ್ಗೆ ಮಾಹಿತಿ ನೀಡುವ ಬದಲು ತಮಗೆ ಅಗತ್ಯವಾದ ನೆರವನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಆದರೂ, ಅಷ್ಟೂ ವಿವರಗಳನ್ನು ಬರೆದುಕೊಂಡು ಹೆಚ್ಚುವರಿ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ಸಹಾಯವಾಣಿಯ ಕರೆ ಸ್ವೀಕರಿಸಲು ನಿಯೋಜಿತರಾದ ಸಿಬ್ಬಂದಿಯೊಬ್ಬರು ತಿಳಿಸಿದರು.

ಸಿ.ಎಂ. ಕಚೇರಿಯಿಂದ ಫೋನ್‌: 150 ಜನ ನಿರಾಶ್ರಿತರ ತಂಡವೊಂದು ಕಲಬುರ್ಗಿಯಲ್ಲಿ ಊಟಕ್ಕಾಗಿ ಪರದಾಡುತ್ತಿತ್ತು. ಜಿಲ್ಲಾಡಳಿತ ಆರಂಭಿಸಿರುವ ಸಹಾಯವಾಣಿಯ ಬಗ್ಗೆ ಮಾಹಿತಿ ಇಲ್ಲದ ತಂಡದವರು ನೇರವಾಗಿ ಮುಖ್ಯಮಂತ್ರಿ ಅವರ ಕಚೇರಿಗೆ ಕರೆ ಮಾಡಿ ತಮ್ಮ ಸಂಕಟವನ್ನು ಹೇಳಿಕೊಂಡಿದ್ದರು. ಸಿ.ಎಂ. ಕಚೇರಿ ಅಧಿಕಾರಿಗಳು ಸಹಾಯವಾಣಿಗೆ ಕರೆ ಮಾಡಿ ಅವರಿಗೆ ಸೂಕ್ತ ಊಟೋಪಚಾರ ಮಾಡುವಂತೆ ನಮಗೆ ಸೂಚನೆ ನೀಡಿದರು. ಇದನ್ನು ಕೂಡಲೇ ನಿರಾಶ್ರಿತರು, ಭಿಕ್ಷುಕರಿಗೆ ಊಟ ಪೂರೈಸಲು ರಚಿಸಲಾದ ಆಹಾರ ಸಮಿತಿಯವರಿಗೆ ಕರೆ ಮಾಡಿ ಮಾಹಿತಿ ನೀಡಿದೆವು. ಅಷ್ಟೂ ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು ಎಂದು ಸಹಾಯವಾಣಿಯ ನಿರ್ವಹಣೆ ಮಾಡುತ್ತಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ‘‍ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು